ಡೈಲಿ ವಾರ್ತೆ: ಮಾ./08/2026

ಪೂಜೆಗೆ ಹೋದ ಅರ್ಚಕ ಹೆಣವಾಗಿ ಪತ್ತೆ! – ಕೊಲೆ ಶಂಕೆ.?

​ಮಂಡ್ಯ,ಮಾ. 08: ಪಕ್ಕದ ಊರಿಗೆ ಪೂಜೆಗಾಗಿ ತೆರಳಿದ್ದ ಅರ್ಚಕರೊಬ್ಬರು ನಾಲೆಯಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸಿದ್ದಲಿಂಗಪ್ಪ (46) ಎಂದು ಗುರುತಿಸಲಾಗಿದ್ದು, ಇವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ವೃತ್ತಿಯಲ್ಲಿ ಅರ್ಚಕರಾಗಿದ್ದ ಸಿದ್ದಲಿಂಗಪ್ಪ ಅವರು ಸದಾ ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದವರು. ಮಾರ್ಚ್ 08ರಂದು ತಮ್ಮ ಮನೆಯಲ್ಲಿ “ಪಕ್ಕದ ಶೆಟ್ಟಿಹಳ್ಳಿ ಗ್ರಾಮಕ್ಕೆ ಪೂಜೆ ಮಾಡಲು ಹೋಗುತ್ತಿದ್ದೇನೆ” ಎಂದು ಹೇಳಿ ಸ್ಕೂಟರ್‌ನಲ್ಲಿ ಹೊರಟಿದ್ದರು. ಆದರೆ, ಸಂಜೆಯಾದರೂ ಅವರು ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದರು.

​ಸಿಡಿಎಸ್ (CDS) ನಾಲೆಯಲ್ಲಿ ಸ್ಕೂಟರ್‌ವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಗ್ರಾಮಸ್ಥರು ನಾಲೆ ಬಳಿ ಹುಡುಕಾಟ ನಡೆಸಿದಾಗ, ಸಿದ್ದಲಿಂಗಪ್ಪ ಅವರ ಮೃತದೇಹ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ.

​ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ಘಟನಾ ಸ್ಥಳದ ಸುತ್ತಮುತ್ತ ರಕ್ತದ ಕಲೆಗಳು ಕಂಡುಬಂದಿರುವುದು ಹತ್ಯೆಯ ಶಂಕೆಯನ್ನು ಬಲಪಡಿಸಿವೆ. “ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಸೌಮ್ಯ ಸ್ವಭಾವದ ಸಿದ್ದಲಿಂಗಪ್ಪ ಅವರಿಗೆ ಈ ಸ್ಥಿತಿ ಬರಲು ಹೇಗೆ ಸಾಧ್ಯ?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಅವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ನಗ್ನ ಸ್ಥಿತಿಯಲ್ಲಿ ನಾಲೆಯಲ್ಲಿ ಎಸೆದಿರಬಹುದು ಎಂದು ಶಂಕಿಸಲಾಗಿದೆ.

​ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.