ಡೈಲಿ ವಾರ್ತೆ: ಮಾ./08/2026

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಮದುವೆ ಆಮಂತ್ರಣ ನೀಡಲು ತೆರಳಿದ್ದವರು ಪ್ರಾಣಾಪಾಯದಿಂದ ಪಾರು.!

​ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ಚಲಿಸುತ್ತಿದ್ದ ಮಾರುತಿ ಓಮಿನಿ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ವಾಹನ ಸಂಪೂರ್ಣ ಭಸ್ಮವಾದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಮಯಪ್ರಜ್ಞೆಯಿಂದ ಕೆಳಗಿಳಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

​ಘಟನೆಯ ವಿವರ:
ದ್ಯಾಮ್ಲಾಪುರ ಗ್ರಾಮದ ಶ್ರೀಕಾಂತ್ ಎಂಬುವವರು ತಮ್ಮ ತಂಗಿಯ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಶಿವಮೊಗ್ಗಕ್ಕೆ ತೆರಳಿ ವಾಪಸ್ ಆಗುತ್ತಿದ್ದರು. ರಾತ್ರಿ 10:20ರ ಸುಮಾರಿಗೆ ಬೆಳ್ಳೂರು ಗ್ರಾಮದ ಶಿಕ್ಷಕ ಸುರೇಶ್ ಅವರ ಮನೆಯ ಬಳಿ ಕಾರು ಬರುತ್ತಿದ್ದಂತೆ, ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಶ್ರೀಕಾಂತ್ ಹಾಗೂ ಅವರ ಜೊತೆಯಲ್ಲಿದ್ದ ಗಂಗಾಧರಗೌಡ ಅವರು ಕಾರಿನಿಂದ ಹೊರಕ್ಕೆ ಓಡಿ ಬಂದಿದ್ದಾರೆ.

ಇವರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾರಿನಾದ್ಯಂತ ವ್ಯಾಪಿಸಿತು. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮದುವೆಗಾಗಿ ಖರೀದಿಸಿದ್ದ ಹೊಸ ಸೀರೆಗಳು, ಬಟ್ಟೆಗಳು, ಆಮಂತ್ರಣ ಪತ್ರಿಕೆಗಳು ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ.

​ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.