

ಡೈಲಿ ವಾರ್ತೆ: ಮಾ./10/2026


ಅಮೆರಿಕ ಕನ್ನಡಿಗನ ಮನೆಯಲ್ಲೇ 3 ಕೋಟಿ ಲೂಟಿ: ಐನಾತಿ ರಾಜಸ್ಥಾನಿ ಕಳ್ಳನನ್ನ ಹೆಡೆಮುರಿ ಕಟ್ಟಿದ ಯಲಹಂಕ ಪೊಲೀಸರು!

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸಿನಿಮೀಯ ಮಾದರಿಯಲ್ಲಿ ಪಕ್ಕದ ಮನೆಯಲ್ಲೇ ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಘಟನೆ ವರದಿಯಾಗಿದ್ದು, ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ಈತ ನಗರದ ಪ್ರತಿಷ್ಠಿತ ಜ್ಯುಡಿಷಿಯಲ್ ಲೇಔಟ್‌ನಲ್ಲಿ ನಡೆದಿದ್ದ ಬೃಹತ್ ಕಳ್ಳತನದ ಕಿಂಗ್‌ಪಿನ್ ಆಗಿದ್ದಾನೆ.
ಬಂಧಿತ ವೇಲಾರಾಮ್ ಪಕ್ಕದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸಕ್ಕಿದ್ದನು. ಅಲ್ಲಿಂದಲೇ ಪಕ್ಕದ ಮನೆಯ ಚಲನವಲನಗಳನ್ನು ಗಮನಿಸುತ್ತಿದ್ದನು. ಈ ಮನೆಯ ಮಾಲೀಕರು ಅಮೆರಿಕದಲ್ಲಿ ನೆಲೆಸಿದ್ದು, ವರ್ಷಕ್ಕೆ ಅಥವಾ ಆರು ತಿಂಗಳಿಗೊಮ್ಮೆ ಮಾತ್ರ ಇಲ್ಲಿಗೆ ಬರುತ್ತಿದ್ದರು. ಮನೆ ಸಂಪೂರ್ಣವಾಗಿ ಖಾಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದ ಆರೋಪಿ, ಬರೋಬ್ಬರಿ ಆರು ತಿಂಗಳುಗಳ ಕಾಲ ಕಳ್ಳತನಕ್ಕೆ ಸಂಚು ರೂಪಿಸಿದ್ದನು.
ಕೆಲಸದ ನೆಪದಲ್ಲಿ ಮೂರು ಬಾರಿ ಮನೆಯ ಮೇಲ್ಭಾಗಕ್ಕೆ ತೆರಳಿ ಸ್ಲೈಡಿಂಗ್ ಡೋರ್ ಮೂಲಕ ಒಳಹೋಗಿ ರೆಕ್ಕಿ ಮಾಡಿದ್ದ. ಅಂತಿಮವಾಗಿ ಮನೆಯೊಳಗೆ ನುಗ್ಗಿ ಲಾಕರ್ ಒಡೆದ ಆರೋಪಿಗೆ ಬರೋಬ್ಬರಿ 1.8 ಕೆಜಿ ಚಿನ್ನಾಭರಣ, ಬೆಲೆಬಾಳುವ ವಜ್ರ ಹಾಗೂ ನಗದು ಸಿಕ್ಕಿತ್ತು. ಇದರ ಒಟ್ಟು ಮೌಲ್ಯ ಅಂದಾಜು 3 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಕೈಗೆ ಸಿಕ್ಕ ಬೃಹತ್ ಮೊತ್ತದ ಆಭರಣಗಳೊಂದಿಗೆ ಯಾರಿಗೂ ತಿಳಿಸದೆ ನೇರವಾಗಿ ರಾಜಸ್ಥಾನಕ್ಕೆ ತೆರಳಿ ತನ್ನ ಮನೆಯಲ್ಲಿ ಅವುಗಳನ್ನು ಬಚ್ಚಿಟ್ಟಿದ್ದನು.
ಅಮೆರಿಕದಲ್ಲಿದ್ದ ಮನೆಯ ಮಾಲೀಕರು ತಮ್ಮ ಮೊಬೈಲ್ ಮೂಲಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಬೆಂಗಳೂರಿನಲ್ಲಿದ್ದ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಯಲಹಂಕ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಚಹರೆಯನ್ನು ಗುರುತಿಸಿ, ಆತನನ್ನು ಬಂಧಿಸಿ ಕಳವು ಮಾಡಿದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.