ಡೈಲಿ ವಾರ್ತೆ: ಮಾ./10/2026

ಹೋಳಿ ಜಗಳದ ದುರಂತ ಅಂತ್ಯ:16 ವರ್ಷದ ಅಪ್ರಾಪ್ತ ಬಾಲಕನಿಂದ 19 ವರ್ಷದ ಯುವಕನ ಕೊಲೆ

ಬಾಗಲಕೋಟೆ, ಮಾ.10: ಇತ್ತೀಚಿನ ದಿನಗಳಲ್ಲಿ ಬಾಲಾಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಣ್ಣ ವಯಸ್ಸಿನಲ್ಲೇ ಕೊಲೆ, ಸುಲಿಗೆ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಅಪ್ರಾಪ್ತರು ಭಾಗಿಯಾಗುತ್ತಿರುವುದು ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ. ಬಳ್ಳಾರಿಯ ಗುರುಕುಲದಲ್ಲಿ 9ನೇ ತರಗತಿ ವಿದ್ಯಾರ್ಥಿಯ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಬಾಗಲಕೋಟೆಯಲ್ಲಿ ಮತ್ತೊಂದು ಶಾಕ್‌ ನೀಡುವ ಘಟನೆ ಬೆಳಕಿಗೆ ಬಂದಿದೆ.

ಹೋಳಿ ಹಬ್ಬದ ದಿನ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಪರಿಚಿತರಾಗಿದ್ದ 16 ವರ್ಷದ ಅಪ್ರಾಪ್ತ ಬಾಲಕ ಹಾಗೂ ರಾಹುಲ್ ಬಾಹುಬಲಿ ಸಪ್ತಸಾಗರ (19) ಎಂಬ ಯುವಕನ ನಡುವೆ ಹೋಳಿ ಹಬ್ಬದ ವೇಳೆ ಜಗಳ ನಡೆದಿದೆ ಎಂದು ತಿಳಿದುಬಂದಿದೆ.

ಜಗಳದ ವೇಳೆ ರಾಹುಲ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಬಾಲಕ ತನ್ನ ಸ್ನೇಹಿತೆ ಮತ್ತು ಗೆಳೆಯರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಈ ವಿಷಯವೇ ಬಳಿಕ ಇಬ್ಬರ ನಡುವೆ ದ್ವೇಷಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆದಲ್ಲಿ ರಾಹುಲ್ ಕಳೆದ ರಾತ್ರಿ ಮಾತುಕತೆ ನಡೆಸಲು ದೇವಸ್ಥಾನದ ಸಮೀಪಕ್ಕೆ ಬಾಲಕನನ್ನು ಕರೆಸಿಕೊಂಡಿದ್ದಾನೆ. ಮಾತುಕತೆ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ ಪರಿಸ್ಥಿತಿ ತೀವ್ರಗೊಂಡು ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು. ಸ್ಥಳದಲ್ಲಿದ್ದ ಸ್ನೇಹಿತರು ಜಗಳವನ್ನು ತಡೆಯಲು ಪ್ರಯತ್ನಿಸಿದರೂ ಅದು ಫಲಿಸಲಿಲ್ಲ ಎಂದು ತಿಳಿದುಬಂದಿದೆ.
ಇದೇ ವೇಳೆ ಬೈಕ್ ಕೀ-ಚೈನ್‌ಗೆ ಜೋಡಿಸಿದ್ದ ಚಾಕುವಿನಿಂದ ಬಾಲಕ ರಾಹುಲ್‌ನ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ರಾಹುಲ್ ಸೆಕೆಂಡ್ ಇಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.