

ಡೈಲಿವಾರ್ತೆ:12/ಮಾರ್ಚ್/2026


ಪೆಟ್ರೋಲ್ ಕೊರತೆ ಗಾಳಿ ಸುದ್ದಿ: ಬಂಕ್ ಮುಂದೆ ಜನರ ದಂಡು, ಜಾರ್‌ನಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಹೋದ ಸವಾರ!

ಚೆನ್ನೈ, ಮಾ.12: ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ ಎಂಬ ಚರ್ಚೆಯ ನಡುವೆಯೇ, ಪೆಟ್ರೋಲ್ ಕೂಡ ಮುಂದೆ ಸಿಗುವುದಿಲ್ಲ ಹಾಗೂ ದರ ಭಾರೀ ಏರಿಕೆಯಾಗಲಿದೆ ಎಂಬ ಗಾಳಿ ಸುದ್ದಿ ತಮಿಳುನಾಡಿನಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇದರ ಪರಿಣಾಮವಾಗಿ ರಾಜ್ಯದ ಹಲವು ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ಗಾಳಿ ಸುದ್ದಿಯನ್ನು ನಂಬಿದ ಹಲವರು ತಮ್ಮ ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ. ಕೆಲವರು ಮನೆಯಲ್ಲಿದ್ದ ಪ್ಲಾಸ್ಟಿಕ್ ಡಬ್ಬೆಗಳು ಹಾಗೂ ಜಾರ್‌ಗಳನ್ನು ತಂದು ಅದಲ್ಲಿಯೂ ಪೆಟ್ರೋಲ್ ಸಂಗ್ರಹಿಸಿಕೊಂಡು ಹೋಗುತ್ತಿರುವುದು ಗಮನ ಸೆಳೆದಿದೆ.
ವಿಶೇಷವಾಗಿ ಒಬ್ಬ ವಾಹನ ಸವಾರ ಮನೆಯಲ್ಲಿದ್ದ ಸುಮಾರು 15 ಲೀಟರ್ ಸಾಮರ್ಥ್ಯದ ವಾಟರ್ ಜಾರ್ ತಂದು ಅದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಉಂಟಾದರೂ ಭಾರತಕ್ಕೆ ಯಾವುದೇ ರೀತಿಯ ತೈಲ ಕೊರತೆ ಎದುರಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಗೆ ಬೇಕಾದಷ್ಟು ತೈಲ ದಾಸ್ತಾನು ಸಂಗ್ರಹಿಸಿಡಲಾಗಿದೆ. ಜೊತೆಗೆ ವಿವಿಧ ದೇಶಗಳಿಂದ ಕಚ್ಚಾ ತೈಲ ಸರಬರಾಜು ನಡೆಯುತ್ತಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಹೀಗಾಗಿ ಗಾಳಿ ಸುದ್ದಿಗಳನ್ನು ನಂಬದೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.