ಡೈಲಿವಾರ್ತೆ:23/ಮಾರ್ಚ್/2026

ಆತ್ರಾಡಿ ಬಳಿ ಭೀಕರ ಅಪಘಾತ: ಟೆಂಪೋ-ಬೈಕ್ ಮುಖಾಮುಖಿ ಢಿಕ್ಕಿ, ಸವಾರ ಸ್ಥಳದಲ್ಲೇ ಸಾವು

​ಉಡುಪಿ: ಜಿಲ್ಲೆಯ ಆತ್ರಾಡಿ ಕಬ್ಯಾಡಿಯ ಅರ್ಮನ್ ಫ್ಯಾಕ್ಟರಿ ಬಳಿ ಇಂದು (ಸೋಮವಾರ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಹೆರ್ಗಾ ಗ್ರಾಮದ ನಿವಾಸಿ ಭಾಸ್ಕರ್ ನಾಯಕ್ (70) ಎಂದು ಗುರುತಿಸಲಾಗಿದೆ.

ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಸಾಗುತ್ತಿದ್ದ ಟೆಂಪೋ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಅರ್ಮನ್ ಫ್ಯಾಕ್ಟರಿ ಸಮೀಪ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಭಾಸ್ಕರ್ ನಾಯಕ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಮತ್ತೊಬ್ಬ ಸವಾರನಿಗೂ ಈ ಅಪಘಾತದಲ್ಲಿ ಬಲವಾದ ಏಟು ಬಿದ್ದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
​ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.