

ಡೈಲಿವಾರ್ತೆ:23/ಮಾರ್ಚ್/2026


ನಕಲಿ ಬಂಗಾರ ನೀಡಿ ವಂಚನೆ: ಪಡುಬಿದ್ರಿ ಪೊಲೀಸರಿಂದ ಆರೋಪಿ ಮಹಿಳೆಯ ಬಂಧನ, ಮತ್ತೊಬ್ಬ ಆರೋಪಿಗಾಗಿ ಶೋಧ

ಪಡುಬಿದ್ರಿ: ನಕಲಿ ಬಂಗಾರದ ಸರವನ್ನು ಅಸಲಿ ಎಂದು ನಂಬಿಸಿ ವೃದ್ಧ ಮಹಿಳೆಯೊಬ್ಬರಿಂದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣವನ್ನು ಭೇದಿಸಿರುವ ಪಡುಬಿದ್ರಿ ಪೊಲೀಸರು, ಓರ್ವ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನಲೆ:
ಕಾಪು ತಾಲೂಕಿನ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪರಿಚಿತ ಮಹಿಳೆ ಮತ್ತು ಪುರುಷರ ತಂಡವೊಂದು ಬಸ್ಸಮ್ಮ ಅವರನ್ನು ಸಂಪರ್ಕಿಸಿ, ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ. ತಮ್ಮ ಬಳಿ ಆರು ಪವನ್ ತೂಕದ ಚಿನ್ನದ ಸರವಿದ್ದು, ತುರ್ತು ಹಣದ ಅವಶ್ಯಕತೆ ಇರುವುದರಿಂದ ಅದನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದಾರೆ.
ವಂಚಕರ ಮಾತು ನಂಬಿದ ಬಸ್ಸಮ್ಮ ಅವರು, ತನ್ನ ಬಳಿಯಿದ್ದ ಸುಮಾರು 2 ಪವನ್ ತೂಕದ (ಅಂದಾಜು ₹1.50 ಲಕ್ಷ ಮೌಲ್ಯದ) ಚಿನ್ನಾಭರಣ ಮತ್ತು ₹6,000 ನಗದು ಹಣವನ್ನು ನೀಡಿ ಆ ಸರವನ್ನು ಪಡೆದುಕೊಂಡಿದ್ದಾರೆ.
ಆರೋಪಿಗಳು ತೆರಳಿದ ನಂತರ ಅನುಮಾನಗೊಂಡ ಬಸ್ಸಮ್ಮ ಅವರು, ತಮಗೆ ನೀಡಲಾದ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಆ ಸರವು ಕೇವಲ ನಕಲಿ ಎಂಬುದು ದೃಢಪಟ್ಟಿದೆ. ಕೂಡಲೇ ಸ್ಥಳಕ್ಕೆ ಮರಳಿದಾಗ ವಂಚಕರು ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಸಂತ್ರಸ್ತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ವಂಚನೆಯ ಜಾಲ ಪತ್ತೆಯಾಗಿದೆ. ಬಂಧಿತ ಆರೋಪಿಯನ್ನು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ ಎಂದು ಗುರುತಿಸಲಾಗಿದೆ. ಬಂಧಿತಳಿಂದ ₹75,000 ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ ₹6,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ವೆಂಕಟೇಶ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.