

ಡೈಲಿವಾರ್ತೆ:24/ಮಾರ್ಚ್/2026


ಮಸೀದಿ ವಿವಾದ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ಗುಂಪು ಘರ್ಷಣೆ: ಹಲವರಿಗೆ ಗಾಯ, ಮೂರು ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಉದ್ವಿಗ್ನತೆ ಗುಂಪು ಘರ್ಷಣೆಗೆ ತಿರುಗಿ, ಹಲವರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಅವರು ನೀಡಿದ ದೂರಿನಂತೆ, ಮಾರ್ಚ್ 22ರಂದು ಬೆಳಿಗ್ಗೆ ತಲೆಮೊಗರು ಮಸೀದಿಯಿಂದ ವಾಪಾಸ್ಸಾಗುತ್ತಿದ್ದ ವೇಳೆ ಶೌಕತ್ ಅವರ ಅಂಗಡಿಯ ಬಳಿ ಆರೋಪಿತರಾದ ಶೌಕತ್, ಇಸಾಕ್, ಶಫೀಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಮತ್ತು ನಿಝಾಲ್ ಅವರು ಮಸೀದಿ ವಿಚಾರವಾಗಿ ತಕರಾರು ಆರಂಭಿಸಿ ಅವಾಚ್ಯವಾಗಿ ನಿಂದಿಸಿ, ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದರೆಂದು ಆರೋಪಿಸಲಾಗಿದೆ. ಗಾಯಗೊಂಡ ನವಾಝ್ ಮತ್ತು ದಾವೂದ್ ಅವರನ್ನು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಅಪರಾಧ ಕ್ರಮಾಂಕ 46/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣದಲ್ಲಿ ಅಬ್ದುಲ್ ಗಫೂರ್ (48) ಅವರು ನೀಡಿದ ದೂರಿನಂತೆ, ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್ ಮತ್ತು ಅಶ್ರಫ್ ಸಾಹೇಬ್ ಅವರು ತಲೆಮೊಗರು ಮಸೀದಿ ಸಮೀಪ ಗಫೂರ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಗಫೂರ್ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪರಾಧ ಕ್ರಮಾಂಕ 47/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೂರನೇ ಪ್ರಕರಣದಲ್ಲಿ ಶೌಕತ್ ಆಲಿ (40) ಅವರು ನೀಡಿದ ದೂರಿನಂತೆ, ತಮ್ಮ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಪ್ ಮತ್ತು ಆಶಿಕ್ ಅವರು ಮಸೀದಿ ವಿಚಾರವಾಗಿ ತಕರಾರು ತೆಗೆದು ಶೌಕತ್ ಅವರ ಸಂಬಂಧಿ ರಬಿಯತ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ನಿಲ್ಲಿಸಲು ಬಂದವರ ಮೇಲೂ ದಾಳಿ ನಡೆಸಲು ಯತ್ನಿಸಿ, ಜೀವ ಬೆದರಿಕೆ ಒಡ್ಡಿದರೆಂದು ಆರೋಪಿಸಲಾಗಿದೆ. ಈ ಸಂಬಂಧ ಅಪರಾಧ ಕ್ರಮಾಂಕ 48/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆಯ ವಿಧಿಗಳೂ ಸೇರಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.