ಡೈಲಿವಾರ್ತೆ:24/ಮಾರ್ಚ್/2026

ಉಡುಪಿ ಶಾಸಕರ ವರ್ತನೆಗೆ ಕೋಟ ನಾಗೇಂದ್ರ ಪುತ್ರನ್ ತೀವ್ರ ಆಕ್ರೋಶ: “ಅಧಿಕಾರದ ಮದದಲ್ಲಿ ಬೆಳೆಸಿದವರನ್ನೇ ತುಳಿಯುತ್ತಿರುವ ಶಾಸಕ”.?

ಉಡುಪಿ: ರಾಜಕೀಯವಾಗಿ ಜನ್ಮ ನೀಡಿದವರನ್ನೇ ಕಡೆಗಣಿಸಿ ಜನಸೇವೆಯ ಹೆಸರಿನಲ್ಲಿ ದರ್ಪ ಮೆರೆಯುತ್ತಿರುವ ಉಡುಪಿಯ ಹಾಲಿ ಶಾಸಕರು ಕ್ಷೇತ್ರದ ಘನತೆಗೆ ಕಪ್ಪುಚುಕ್ಕೆ ತಂದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ತೀವ್ರವಾಗಿ ಕಿಡಿಕಾರಿದ್ದಾರೆ.

ಶಾಸಕರ ಸರಣಿ ವಿವಾದಾತ್ಮಕ ನಡವಳಿಕೆಗಳ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನಾಗೇಂದ್ರ ಪುತ್ರನ್ ಅವರು, ಮಾಜಿ ಶಾಸಕರಾದ ರಘುಪತಿ ಭಟ್ ಅವರಿಗೆ ಅಂದು ಟಿಕೆಟ್ ಕೈತಪ್ಪಿದರೂ ಸಹ ಅವರೇ ಈ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮನೆ ಮನೆಗೆ ಸುತ್ತಿ ಗೆಲ್ಲಿಸಿದ್ದರು. ಆದರೆ ತನಗೆ ಅಸ್ತಿತ್ವ ನೀಡಿದವರನ್ನೇ ಇಂದು ಕಡೆಗಣಿಸಿರುವ ಈ ಶಾಸಕ ತಮಗೆ ರಾಜಕೀಯ ಆಶ್ರಯ ನೀಡಿದವರಿಗೇ ದ್ರೋಹ ಬಗೆಯುತ್ತಿದ್ದಾರೆ.
ಇವರಿಂದ ಸಾರ್ವಜನಿಕರು ನೈತಿಕತೆಯನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ.

ಅಲ್ಲದೆ ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಶಾಸಕರಿಗೆ ಪುರುಸೊತ್ತಿಲ್ಲ. ಅದರ ಬದಲಿಗೆ ಪೊಲೀಸ್ ಅಧಿಕಾರಿಗಳ ಮೇಲೆ ಕೈ ಮಾಡುವುದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೌರ್ಜನ್ಯ ಎಸಗುವುದು ಇವರ ನಿತ್ಯದ ಕಾಯಕವಾಗಿದೆ.

ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಅಂತ
ಅಂದು ಮನವಿ ನೀಡಲು ಹೋದಾಗ ಪೊಲೀಸರನ್ನು ತಳ್ಳುವ ಅನಿವಾರ್ಯತೆ ಏನಿತ್ತು? ಇದು ಗೂಂಡಾ ಪ್ರವೃತ್ತಿಯಲ್ಲದೆ ಮತ್ತೇನು?” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ನಡುರಾತ್ರಿಯಲ್ಲಿ ಸಿಕ್ಕ ಅಧಿಕಾರದ ಅಮಲಿನಲ್ಲಿ ಶಾಸಕರು ತಾವು ನಡೆದು ಬಂದ ದಾರಿಯನ್ನು ಮರೆತಿದ್ದಾರೆ. ಉಡುಪಿಯ ಜನತೆ ಶಾಂತಿಪ್ರಿಯರು. ಇಲ್ಲಿ ಅಭಿವೃದ್ಧಿಯ ಜಪ ಮಾಡುವ ಬದಲು ಗೂಂಡಾಗಿರಿ, ರೌಡಿಸಂ ಮತ್ತು ಗಲಾಟೆಗಳಿಗೆ ಶಾಸಕರು ಸಾಥ್ ನೀಡುತ್ತಿದ್ದಾರೆ. ಇವರ ಇಂತಹ ದುರಹಂಕಾರದ ವರ್ತನೆಯಿಂದಾಗಿ ಉಡುಪಿ ಕ್ಷೇತ್ರದ ಜನತೆ ಇಂದು ತಲೆತಗ್ಗಿಸುವಂತಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರ ಎಂಬುದು ಶಾಶ್ವತವಲ್ಲ, ಅದು ಬರುತ್ತದೆ ಮತ್ತು ಹೋಗುತ್ತದೆ. ಆದರೆ ಜನರೊಂದಿಗೆ ವರ್ತಿಸುವ ರೀತಿ ಶಾಶ್ವತವಾಗಿ ಉಳಿಯುತ್ತದೆ. ಶಾಸಕರ ಈ ದರ್ಪದ ನಡೆಗಳು ಮುಂದಿನ ದಿನಗಳಲ್ಲಿ ಅವರಿಗೆ ಮುಳುವಾಗಲಿವೆ. ಉಡುಪಿಯ ಪ್ರಬುದ್ಧ ಮತದಾರರು ಇವರ ಈ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಎಚ್ಚರಿಸಿದ್ದಾರೆ.