

ಡೈಲಿವಾರ್ತೆ:24/ಮಾರ್ಚ್/2026


ಕುಂದಾಪುರ| ನಿರ್ಮಾಣ ಹಂತದ ಮನೆ ಕೆಲಸದ ವೇಳೆ ದುರಂತ – ಏಣಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಗಾರೆ ಕಾರ್ಮಿಕ ಸಾವು

ಕುಂದಾಪುರ: ಇಲ್ಲಿನ ಕಡ್ಗಿಮನೆ ರಸ್ತೆಯ ನಿರ್ಮಾಣ ಹಂತದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕುಂದಾಪುರ ತಾಲೂಕಿನ ಕಂದಾವರ ಸಾಂತಾವರ ನಿವಾಸಿ, ಮುತ್ತ ಮತ್ತು ಗಂಗಾ ದಂಪತಿಗಳ ಪುತ್ರ ಶಿವರಾಜ್ (35) ಮೃತಪಟ್ಟ ದುರ್ದೈವಿ.
ಪ್ರವೀಣ್ ಖಾರ್ವಿ ಎಂಬುವರ ಹೊಸ ಮನೆಯ ನಿರ್ಮಾಣ ಕಾರ್ಯಕ್ಕಾಗಿ ಶಿವರಾಜ್ ಹಾಗೂ ಇತರ ಕಾರ್ಮಿಕರು ಆಗಮಿಸಿದ್ದರು. ಕೆಲಸದ ನಡುವೆ ಕಬ್ಬಿಣದ ಏಣಿಯನ್ನು ಸ್ಥಳಾಂತರಿಸುವಾಗ, ಮನೆಯ ಪಕ್ಕದಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ಏಣಿ ಆಕಸ್ಮಿಕವಾಗಿ ಸ್ಪರ್ಶಿಸಿದೆ.
ತೀವ್ರವಾಗಿ ವಿದ್ಯುತ್ ಆಘಾತಕ್ಕೊಳಗಾದ ಶಿವರಾಜ್ ಅವರನ್ನು ತಕ್ಷಣವೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಜೊತೆಯಲ್ಲಿದ್ದ ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಶಿವರಾಜ್ ಮೂಲತಃ ಬಸ್ರೂರು ಸಮೀಪದ ಮಾರ್ಗೋಳಿಯವರಾಗಿದ್ದು, ಕಳೆದ 15 ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದರು. ಅವಿವಾಹಿತರಾಗಿದ್ದ ಇವರು ಕೇವಲ ಕಾಯಕಜೀವಿಯಷ್ಟೇ ಅಲ್ಲದೆ, ಸ್ಥಳೀಯವಾಗಿ ಉತ್ತಮ ಕ್ರಿಕೆಟ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಇವರ ಅಕಾಲಿಕ ಮರಣವು ಕುಟುಂಬಸ್ಥರು ಹಾಗೂ ಸ್ನೇಹಿತ ವಲಯದಲ್ಲಿ ತೀವ್ರ ಶೋಕ ತಂದಿದೆ.
ಮನೆ ನಿರ್ಮಾಣದ ಸಂದರ್ಭದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಅನ್ನು ಪಕ್ಕಕ್ಕೆ ಸರಿಸಲಾಗಿತ್ತು ಎನ್ನಲಾಗಿದ್ದರೂ, ಅದೇ ಮಾರ್ಗವು ಇಂದು ಕಾರ್ಮಿಕನ ಬಲಿ ಪಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಎರಡೂ ಕಡೆಯವರು ಮಾತುಕತೆಯ ಮೂಲಕ ರಾಜಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.