ಡೈಲಿವಾರ್ತೆ:24/ಮಾರ್ಚ್/2026

ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಸಂಚು: ಬೆಂಗಳೂರಿನಲ್ಲಿ ರೋಹಿತ್ ಪವಾರ್ ಸ್ಫೋಟಕ ದೂರು!

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ಪ್ರಕರಣ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಜನವರಿ 28ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ಆ ವಿಮಾನ ಅಪಘಾತ ಕೇವಲ ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಸಂಚು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ದಾಖಲಿಸಿದ್ದು, ಹಲವು ಅನುಮಾನಾಸ್ಪದ ಸಂಗತಿಗಳನ್ನು ಹೊರಹಾಕಿದ್ದಾರೆ.

ರೋಹಿತ್ ಪವಾರ್ ನೀಡಿರುವ ದೂರಿನ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಹಾರಾಟಕ್ಕೆ ಕಿಂಚಿತ್ತೂ ಯೋಗ್ಯವಾಗಿರಲಿಲ್ಲ. ಅಮೆರಿಕದಲ್ಲಿ ಈಗಾಗಲೇ ಸೇವೆಯಿಂದ ನಿವೃತ್ತಿಗೊಂಡಿದ್ದ ಹಳೆಯ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ವಿಮಾನದ ಸುರಕ್ಷಿತ ಹಾರಾಟದ ಮಿತಿ 5,000 ಗಂಟೆಗಳಿದ್ದರೂ, ಸುಮಾರು 8,000 ಗಂಟೆ ಹಾರಾಟ ನಡೆಸಿದ್ದ ದಾಖಲೆಗಳನ್ನು ತಿದ್ದಿ, ವಾಣಿಜ್ಯ ಬಳಕೆಗೆ ಹಸಿರು ನಿಶಾನೆ ನೀಡಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಇನ್ನು ಪೈಲಟ್ ಸುಮಿತ್ ಕಪೂರ್ ಆಯ್ಕೆಯ ಬಗ್ಗೆಯೂ ದೊಡ್ಡ ಪ್ರಶ್ನೆ ಎದ್ದಿದೆ. ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದ ಇತಿಹಾಸವಿರುವ ಕಪೂರ್ ಅವರನ್ನು ಉಪಮುಖ್ಯಮಂತ್ರಿಗಳಂತಹ ಗಣ್ಯರ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಏಕೆ? ಕೊನೆಯ ಕ್ಷಣದಲ್ಲಿ ನಿಗದಿತ ಪೈಲಟ್‌ಗಳನ್ನು ಬದಲಿಸಿ ಕಪೂರ್ ತಂಡವನ್ನು ಕರೆತಂದಿದ್ದು ಉದ್ದೇಶಪೂರ್ವಕವೇ ಎನ್ನುವ ಸಂಶಯ ವ್ಯಕ್ತವಾಗಿದೆ.

ಅಪಘಾತದ ಕೆಲವೇ ಕ್ಷಣಗಳ ಮೊದಲು ಕೋ-ಪೈಲಟ್ “ಓ ಶಿಟ್” ಎಂದು ಕಿರುಚಿದರೂ, ಮುಖ್ಯ ಪೈಲಟ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಷ್ಟೇ ಅಲ್ಲದೆ, ಬಾರಾಮತಿಯಲ್ಲಿ ದಟ್ಟ ಮಂಜು ಕವಿದು ವಿಸಿಬಿಲಿಟಿ ಇಲ್ಲದಿದ್ದರೂ, ಟೇಬಲ್‌ಟಾಪ್ ರನ್‌ವೇನಲ್ಲಿ ಅಪಾಯಕಾರಿ ಲ್ಯಾಂಡಿಂಗ್‌ಗೆ ಯಾರು ಅನುಮತಿ ನೀಡಿದರು? ರಸ್ತೆ ಮೂಲಕ ಹೋಗಬೇಕಿದ್ದ ಅಜಿತ್ ಪವಾರ್ ಅವರ ಪ್ರಯಾಣ ಕೊನೆ ಕ್ಷಣದಲ್ಲಿ ವಿಮಾನಕ್ಕೆ ಬದಲಾಗಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳು ಈಗ ತನಿಖೆಯ ಕೇಂದ್ರಬಿಂದುವಾಗಿವೆ.

ಡಿಜಿಸಿಎ ನಿಯಮಗಳನ್ನು ಗಾಳಿಗೆ ತೂರಿ ವಿಎಸ್ಆರ್ ವೆಂಚರ್ಸ್ ಕಾರ್ಯಾಚರಣೆ ನಡೆಸಿದೆ ಎಂದು ಆರೋಪಿಸಲಾಗಿದ್ದು, ಬೆಂಗಳೂರಿನ ಪೊಲೀಸರು ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಹೇಗೆ ಕೈಗೆತ್ತಿಕೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.