ಡೈಲಿವಾರ್ತೆ:24/ಮಾರ್ಚ್/2026

ಬ್ರಹ್ಮಾವರ: ಮಾಚ್‌ 29ರಂದು ‘ಎಂ. ಚಂದ್ರಶೇಖರ್ ಹೆಗ್ಡೆ ಕ್ಲಬ್ ಹೌಸ್’ ಲೋಕಾರ್ಪಣೆ

​ಬ್ರಹ್ಮಾವರ: ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ (ರಿ) ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ‘ಎಂ. ಚಂದ್ರಶೇಖರ್ ಹೆಗ್ಡೆ ಕ್ಲಬ್ ಹೌಸ್’ ಮಾರ್ಚ್ 29ರ ಭಾನುವಾರ ಸಂಜೆ 5:30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಕ್ಲಬ್‌ನ ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಹೆಗ್ಡೆ ತಿಳಿಸಿದ್ದಾರೆ.

​ಮಾರ್ಚ್ 24ರಂದು ಕ್ಲಬ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸುಸಜ್ಜಿತ ಕಟ್ಟಡದ ಕುರಿತು ಮಾಹಿತಿ ನೀಡಿದರು.

ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಈ ಕ್ಲಬ್ ಹೌಸ್ ನಿರ್ಮಾಣಗೊಂಡಿದೆ. ಇದರಲ್ಲಿ 8 ಹವಾನಿಯಂತ್ರಿತ ಕೊಠಡಿಗಳು, ರೆಸ್ಟೋರೆಂಟ್, ಜಿಮ್ನಾಷಿಯಂ, ಸ್ನೂಕರ್ ರೂಮ್, ರಿಕ್ರಿಯೇಷನ್ ಕ್ಲಬ್ ಹಾಗೂ ಕ್ಲಬ್‌ನ ಪ್ರಧಾನ ಕಚೇರಿ ಒಳಗೊಂಡಿದೆ ಎಂದು ಹೇಳಿದರು.

ಕ್ಲಬ್ ಅಧ್ಯಕ್ಷರಾದ ಬಿಜು ಜಿ. ನಾಯರ್ ಮಾತನಾಡಿ ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿಯಾಗಿ, ಸಂಚಾಲಕರಾಗಿ ಹಾಗೂ ಸುದೀರ್ಘ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಎಂ. ಚಂದ್ರಶೇಖರ್ ಹೆಗ್ಡೆ ಅವರ ಯೋಗದಾನವನ್ನು ಸ್ಮರಿಸಿ, ಈ ಕಟ್ಟಡಕ್ಕೆ ಅವರ ಹೆಸರನ್ನೇ ಇಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.
​ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಯಶ್ಪಾಲ್ ಎ. ಸುವರ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಆನಂದ್ ಸಿ ಕುಂದರ್, ಎಚ್. ಎಸ್. ಶೆಟ್ಟಿ, ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.

​ಕ್ಲಬ್ ಖಚಾಂಚಿ ವಿಕ್ರಂ ಪ್ರಭು ಮಾತನಾಡಿ ಕ್ಲಬ್ ಕೇವಲ ಸದಸ್ಯರಿಗೆ ಮಾತ್ರವಲ್ಲದೆ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕ್ಲಬ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರತಿವರ್ಷ ಬೇಸಿಗೆ ಶಿಬಿರದ ಮೂಲಕ ಈಜು, ಟೆನ್ನಿಸ್, ಶಟಲ್ ಹಾಗೂ ಯೋಗ ತರಬೇತಿ ನೀಡಲಾಗುತ್ತಿದೆ. ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕ್ಲಬ್ ವತಿಯಿಂದ ಆರ್ಥಿಕ ಪ್ರೋತ್ಸಾಹ ಹಾಗೂ ಸನ್ಮಾನವನ್ನೂ ಮಾಡಲಾಗುತ್ತಿದೆ ಎಂದು ಹೇಳಿದರು.

​ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಬಿಜು ಜಿ. ನಾಯರ್, ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಹೆಗ್ಡೆ,
ಖಜಾಂಜಿ ವಿಕ್ರಂ ಪ್ರಭು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯೆ ಪಂಚಮಿ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.