ಡೈಲಿವಾರ್ತೆ:25/ಮಾರ್ಚ್/2026

ಬುದ್ಧಿವಂತರ ಜಿಲ್ಲೆಯಲ್ಲೇ ಸೈಬರ್ ಬಲೆ: ಎಐ ಟ್ರೇಡಿಂಗ್ ಆಮಿಷಕ್ಕೆ ಉಡುಪಿ ವ್ಯಕ್ತಿಗೆ 57.70 ಲಕ್ಷ ರೂ. ವಂಚನೆ!

​ಉಡುಪಿ: ಜಿಲ್ಲೆಯ ಜನರನ್ನು ಸುಶಿಕ್ಷಿತರು ಮತ್ತು ಬುದ್ಧಿವಂತರು ಎಂದು ಕರೆಯಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಇದೇ ಬುದ್ಧಿವಂತಿಕೆಯನ್ನು ಬಂಡವಾಳ ಮಾಡಿಕೊಂಡು ಹೈಟೆಕ್ ದರೋಡೆಗೆ ಇಳಿದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಅಂತರಾಷ್ಟ್ರೀಯ ಮಟ್ಟದ ಎಐ (AI) ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಉಡುಪಿಯ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 57.70 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

​ಘಟನೆಯ ವಿವರ:
​ದೂರುದಾರರಾದ ಅನಿಲ್ ಎಂಬುವವರು ಫೇಸ್‌ಬುಕ್‌ನಲ್ಲಿ ‘ಇಂಟರ್ ನ್ಯಾಶನಲ್ ರಿಪೋರ್ಟಿಂಗ್ ಎ.ಐ ಟ್ರೆಡಿಂಗ್’ (International Reporting AI Trading) ಎಂಬ ಆಕರ್ಷಕ ವಿಡಿಯೋ ಜಾಹೀರಾತನ್ನು ನೋಡಿದ್ದರು. ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ವಂಚಕರು ಅವರಿಗೆ ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿದ್ದಾರೆ. ನಂತರ ಅವರನ್ನು ‘Manav Verma’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸುವ ಮೂಲಕ ವಿಶ್ವಾಸ ಗಳಿಸಿದ್ದಾರೆ.

​ಹಂತ ಹಂತವಾಗಿ ನಡೆದ ಲೂಟಿ:
​ವಾಟ್ಸಾಪ್ ಕರೆಗಳ ಮೂಲಕ ಮಾತುಕತೆ: ಅಪರಿಚಿತ ವ್ಯಕ್ತಿಗಳು ಸೆಪ್ಟೆಂಬರ್ 2025ರಲ್ಲಿ ಅನಿಲ್ ಅವರಿಗೆ ವಾಟ್ಸಾಪ್ ಕರೆ ಮಾಡಿ, ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು.
ವಾಟ್ಸಾಪ್ ಗ್ರೂಪ್‌ನಲ್ಲಿ ನಕಲಿ ಲಾಭದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಅನಿಲ್ ಅವರಲ್ಲಿ ಹೂಡಿಕೆ ಮಾಡುವ ಆಸೆ ಹುಟ್ಟಿಸಿದ್ದಾರೆ.

​ ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿ ಅತಿ ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಅನಿಲ್ ಅವರು, ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ 02/12/2025 ರಿಂದ 09/02/2026 ರ ಅವಧಿಯಲ್ಲಿ ನೆಫ್ಟ್ (NEFT) ಮತ್ತು ಆರ್.ಟಿ.ಜಿ.ಎಸ್ (RTGS) ಮೂಲಕ ಹಂತ ಹಂತವಾಗಿ ಒಟ್ಟು ₹57,70,945.60 ಹಣವನ್ನು ವರ್ಗಾಯಿಸಿದ್ದಾರೆ.
​ಬರೋಬ್ಬರಿ 57 ಲಕ್ಷಕ್ಕೂ ಅಧಿಕ ಹಣ ಹೂಡಿಕೆ ಮಾಡಿದ ನಂತರ, ಅನಿಲ್ ಅವರು ತಾವು ಹೂಡಿದ ಅಸಲು ಹಣ ಅಥವಾ ಬಂದ ಲಾಭಾಂಶವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ವಂಚಕರು ಸಂಪರ್ಕಕ್ಕೆ ಸಿಗದೆ ಸತಾಯಿಸಿದ್ದಾರೆ. ತಾವು ಮೋಸ ಹೋಗಿರುವುದು ಮನವರಿಕೆಯಾಗುತ್ತಿದ್ದಂತೆ ಅನಿಲ್ ಅವರು ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ.

​​ಈ ಬೃಹತ್ ವಂಚನೆಯ ಕುರಿತು ಉಡುಪಿಯ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಕಲಂ 66(C), 66(D) ಮತ್ತು ಬಿಎನ್ಎಸ್ (BNS) ಕಲಂ 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

​ಸಾರ್ವಜನಿಕರಿಗೆ ಎಚ್ಚರಿಕೆ:
“ಯಾವುದೇ ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳು ಅಥವಾ ಸಾಮಾಜಿಕ ಜಾಲತಾಣದ ಜಾಹೀರಾತುಗಳನ್ನು ನಂಬಿ ಹಣ ಹೂಡಿಕೆ ಮಾಡಬೇಡಿ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭಾಂಶ ನೀಡುವ ಆಮಿಷಗಳೇ ಸೈಬರ್ ಕಳ್ಳರ ಪ್ರಮುಖ ಅಸ್ತ್ರಗಳಾಗಿವೆ,” ಎಂದು ಪೊಲೀಸರು ಎಚ್ಚರಿಸಿದ್ದಾರೆ.