

ಡೈಲಿವಾರ್ತೆ:25/ಮಾರ್ಚ್/2026


ಸಾಸ್ತಾನ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ಯತ್ನ: ಮೂವರ ವಿರುದ್ಧ ಪ್ರಕರಣ ದಾಖಲು

ಕೋಟ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ರಾಡ್‌ನಿಂದ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಕಳೆದ 8 ವರ್ಷಗಳಿಂದ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಯೋಗೀಶ್ ಕುಮಾರ್ (42) ಅವರು ನೀಡಿದ ದೂರಿನಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಾರ್ಚ್ 24ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಬಸ್ಸೊಂದು ಟೋಲ್ ಪಾವತಿಸುತ್ತಿದ್ದ ಸಂದರ್ಭದಲ್ಲಿ, ಅದರ ಹಿಂದೆಯೇ ಬಂದ KA-54-6555 ನೋಂದಣಿ ಸಂಖ್ಯೆಯ ಹೋಂಡಾ ಅಮೇಜ್ ಕಾರಿನಲ್ಲಿದ್ದ ವ್ಯಕ್ತಿಗಳು ದಾಂಧಲೆ ನಡೆಸಿದ್ದಾರೆ.
ಕಾರಿನಲ್ಲಿದ್ದ ವೆಂಕಟೇಶ ಪ್ರಸಾದ್ ಎಂಬಾತನು ಕೆಳಗಿಳಿದು ಬಂದು, “ಕಾರ್ ಬಿಡಲು ಯಾಕೆ ತಡ ಮಾಡುತ್ತೀರಿ?” ಎಂದು ಕೂಗಾಡುತ್ತಾ ಟೋಲ್ ಬ್ಯಾರಿಯರ್‌ಗೆ ಕಾಲಿನಿಂದ ಒದ್ದಿದ್ದಾನೆ. ಅಲ್ಲದೆ, ಅಲ್ಲಿದ್ದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ದೂಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ:
ಜಗಳ ವಿಕೋಪಕ್ಕೆ ಹೋದಾಗ ಕಾರಿನಲ್ಲಿದ್ದ ವಿನಾಯಕ್ ಎಂಬಾತ ಕಬ್ಬಿಣದ ರಾಡ್ ಹಿಡಿದು ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಪಕ್ಕಕ್ಕೆ ಸರಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯನ್ನು ತಡೆಯಲು ಹೋದ ಮ್ಯಾನೇಜರ್ ಯೋಗೀಶ್ ಕುಮಾರ್ ಅವರಿಗೂ ಆರೋಪಿಗಳು ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಘಟನೆಯ ಬೆನ್ನಲ್ಲೇ ಚಾಲಕ ಧನುಷ್ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 47/2026 ರಂತೆ, ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 352, 110 ಜೊತೆಗೆ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.