ಡೈಲಿವಾರ್ತೆ:25/ಮಾರ್ಚ್/2026

ಕಾಪು ಕಡಲ ತೀರದಲ್ಲಿ ತಮಿಳುನಾಡು ಮೀನುಗಾರರ ದಾಂಧಲೆ: ಸ್ಥಳೀಯ ದೋಣಿಗೆ ಡಿಕ್ಕಿ ಹೊಡೆಸಿ ಮೀನುಗಾರ ನಾಪತ್ತೆ

​ಕಾಪು: ಇಲ್ಲಿನ ಸಮುದ್ರ ತೀರದಲ್ಲಿ ಅಕ್ರಮವಾಗಿ ಪಾಚ್ಚಾಲೆ (ಅಜಿರ್) ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡು ಮೂಲದ ಮೀನುಗಾರರ ಅತಿರೇಕದ ವರ್ತನೆಗೆ ಸ್ಥಳೀಯ ಮೀನುಗಾರರೊಬ್ಬರು ಸಮುದ್ರಪಾಲಾದ ದಾರುಣ ಘಟನೆ ಸಂಭವಿಸಿದೆ.

ಉದ್ದೇಶಪೂರ್ವಕವಾಗಿ ದೊಡ್ಡ ದೋಣಿಯನ್ನು ಸ್ಥಳೀಯರ ಸಣ್ಣ ದೋಣಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಇಬ್ಬರು ಮೀನುಗಾರರು ನೀರಿಗೆ ಬಿದ್ದು ಒಬ್ಬರು ನಾಪತ್ತೆಯಾಗಿದ್ದಾರೆ.

​ಕಳೆದ ಕೆಲವು ದಿನಗಳಿಂದ ಕಾಪು ಕಡಲ ಕಿನಾರೆಯ ಸುತ್ತಮುತ್ತ ತಮಿಳುನಾಡು ಮೂಲದ ಮೀನುಗಾರರು ಅಕ್ರಮವಾಗಿ ಅಜಿರ್ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಸ್ಥಳೀಯ ಮೀನುಗಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಕಾಪು ಮೂಲದ ಮೀನುಗಾರರು, ಇಂದು ಸಣ್ಣ ದೋಣಿಯಲ್ಲಿ ತೆರಳಿ ಅಕ್ರಮ ಚಟುವಟಿಕೆಯನ್ನು ನಿಲ್ಲಿಸುವಂತೆ ವಿನಂತಿಸಲು ಮುಂದಾಗಿದ್ದರು.

ಸ್ಥಳೀಯರು ಮನವಿ ಮಾಡಲು ಹೋದ ಸಂದರ್ಭದಲ್ಲಿ ಆಕ್ರೋಶಗೊಂಡ ತಮಿಳುನಾಡು ಮೀನುಗಾರರು, ತಮ್ಮಲ್ಲಿದ್ದ ಬೃಹತ್ ದೋಣಿಯನ್ನು ಸ್ಥಳೀಯರ ಸಣ್ಣ ದೋಣಿಗೆ ಅತ್ಯಂತ ವೇಗವಾಗಿ ಮತ್ತು ಉದ್ದೇಶಪೂರ್ವಕವಾಗಿ ಗುದ್ದಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ಥಳೀಯ ದೋಣಿ ನಡುಸಮುದ್ರದಲ್ಲೇ ಮುಗುಚಿ ಬಿದ್ದಿದ್ದು, ಅದರಲ್ಲಿದ್ದ ಇಬ್ಬರು ಮೀನುಗಾರರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿಗೆ ಬಿದ್ದಿದ್ದಾರೆ.

ನೀರಿಗೆ ಬಿದ್ದ ಇಬ್ಬರಲ್ಲಿ ಒಬ್ಬರನ್ನು ತಕ್ಷಣವೇ ರಕ್ಷಿಸಲಾಗಿದೆಯಾದರೂ, ಮತ್ತೊಬ್ಬ ಮೀನುಗಾರ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ನಡೆದ ಕೂಡಲೇ ತಮಿಳುನಾಡು ಮೂಲದ ಮೀನುಗಾರರು ಮಾನವೀಯತೆಯನ್ನೂ ಮರೆತು ತಮ್ಮ ದೋಣಿಯೊಂದಿಗೆ ಮಲ್ಪೆಯತ್ತ ಪಲಾಯನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರರಾಜ್ಯದ ಮೀನುಗಾರರು ನಮ್ಮ ಕಡಲ ವ್ಯಾಪ್ತಿಯಲ್ಲಿ ಅಕ್ರಮ ಎಸಗುವುದಲ್ಲದೆ, ಪ್ರಾಣಕ್ಕೆ ಸಂಚಕಾರ ತರುತ್ತಿರುವುದು ಮೀನುಗಾರ ಸಮುದಾಯದಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕರಾವಳಿ ಕಾವಲು ಪೊಲೀಸ್ ಪಡೆ ಮತ್ತು ಮತ್ಸೋದ್ಯಮ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.