ಡೈಲಿವಾರ್ತೆ:25/ಮಾರ್ಚ್/2026

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳ: ನೂತನ ಅಧ್ಯಕ್ಷರಾಗಿ ಪ್ರಕಾಶ ಕಾರಂತ ಆಯ್ಕೆ

​ಉಡುಪಿ: ಐತಿಹಾಸಿಕ ಪ್ರಸಿದ್ಧ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ 2026-31ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬುಧವಾರ ನಡೆದಿದ್ದು, ಅಧ್ಯಕ್ಷರಾಗಿ ಪ್ರಕಾಶ ಕಾರಂತ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

​ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.

​ನೂತನ ಪದಾಧಿಕಾರಿಗಳ ವಿವರ:
​ಅಧ್ಯಕ್ಷರಾಗಿ ಪ್ರಕಾಶ ಕಾರಂತ, ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ, ​ಕಾರ್ಯದರ್ಶಿ ಪರುಷರಾಮ್ ಭಟ್, ಕೋಶಾಧಿಕಾರಿ ಎಂ. ಲಕ್ಷ್ಮೀನಾರಾಯಣ ಹೊಳ್ಳ ಅವರನ್ನು ನೇಮಕ ಮಾಡಲಾಯಿತು.

​ಚುನಾವಣಾ ಪ್ರಕ್ರಿಯೆ:
ದೇವಳದ ಆಡಳಿತ ಮಂಡಳಿಯ ಆರು ಕ್ಷೇತ್ರಗಳಿಗೆ ಮಾರ್ಚ್ 15ರಂದು ಮತದಾನ ನಡೆದಿತ್ತು. ಇದರಲ್ಲಿ ಕರ್ನಾಟಕೇತರ ಭಾರತದ ಇತರ ರಾಜ್ಯಗಳ ಕ್ಷೇತ್ರದಿಂದ ಎಂ. ಲಕ್ಷ್ಮೀನಾರಾಯಣ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಐದು ಕ್ಷೇತ್ರಗಳಿಗೆ ನಡೆದ ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಒಟ್ಟು 2,829 ಮತಗಳು ಚಲಾವಣೆಯಾಗಿದ್ದವು.

​ಕ್ಷೇತ್ರವಾರು ಆಯ್ಕೆಯಾದ ಸದಸ್ಯರು:
ವಿವಿಧ ಕ್ಷೇತ್ರಗಳಿಂದ ಗೆಲುವು ಸಾಧಿಸಿದ ಪ್ರಮುಖರಲ್ಲಿ ಜಿ. ಪ್ರಕಾಶ ಮಯ್ಯ (ಬೆಂಗಳೂರು), ಬಿ. ಚಂದ್ರಶೇಖರ ನಾವಡ ಬೈಂದೂರು (ಉಡುಪಿ ಜಿಲ್ಲೆಯ ಉಳಿದ ಭಾಗಗಳು), ಬಿ.ಜಿ. ಕೃಷ್ಣಮೂರ್ತಿ (ಕರ್ನಾಟಕದ ಉಳಿದ ಭಾಗಗಳು) ಹಾಗೂ ಸಾಲಿಗ್ರಾಮ ಕ್ಷೇತ್ರದಿಂದ ಪ್ರಸನ್ನ ತುಂಗ, ಕೆ. ತಾರಾನಾಥ ಹೊಳ್ಳ ಅವರು ಆಡಳಿತ ಮಂಡಳಿಗೆ ಸೇರ್ಪಡೆಗೊಂಡಿದ್ದಾರೆ.

​ಬುಧವಾರ ಬೆಳಿಗ್ಗೆ ನಡೆದ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಮೃತ ಹೊಳ್ಳ ಅವರು ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ದೇವಳದ ಮಾಜಿ ಅಧ್ಯಕ್ಷರಾದ ಜಗದೀಶ್ ಕಾರಂತ್, ಕೆ. ಎಸ್. ಕಾರಂತ್ ಸೇರಿದಂತೆ ಸಮಾಜದ ಹಿರಿಯರು ಮತ್ತು ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ನೂತನ ಮಂಡಳಿಯು ಮುಂದಿನ ಐದು ವರ್ಷಗಳ ಕಾಲ ದೇವಳದ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಲಿದೆ.