ಡೈಲಿವಾರ್ತೆ:25/ಮಾರ್ಚ್/2026

ಗಂಗೊಳ್ಳಿ: ಮಸೀದಿ ಬಳಿ ವ್ಯಕ್ತಿಗೆ ಹಲ್ಲೆ – ಮನೆಗೂ ಬೆದರಿಕೆ: 9 ಮಂದಿಯ ವಿರುದ್ಧ ಪ್ರಕರಣ ದಾಖಲು

ಗಂಗೊಳ್ಳಿ: ಹಕ್ಲಾಡಿ ಗ್ರಾಮದಲ್ಲಿ ಮಸೀದಿ ಬಳಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ನಂತರ ಮನೆಗೂ ಬಂದು ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರಾದ ಅಯುಬ್‌ (48), ಹಕ್ಲಾಡಿ ಗ್ರಾಮ, ಕುಂದಾಪುರ ನಿವಾಸಿಯಾಗಿದ್ದು, ಮಾರ್ಚ್ 23, 2026ರಂದು ರಾತ್ರಿ ಸುಮಾರು 8:15 ಗಂಟೆಗೆ ಮಸೀದಿಗೆ ತೆರಳಿ ವಾಪಾಸು ಮನೆಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಮಸೀದಿ ಸಮೀಪದಲ್ಲೇ ಆರೋಪಿತರಾದ ಇಬ್ರಾಹಿಂ, ಅಮೀರ್ ಬಾಷಾ, ನೈನಾರ್, ನುರುಲ್ಲಾ, ಮಸೂದ್, ಖಾದರ್ (ಗಂಗೊಳ್ಳಿ), ರಿಶಾನ್, ಸಮರ್ ಹಾಗೂ ಶಾಕೀರ್ ಅವರು ಅಯುಬ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು ಹಾಗೂ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಅಯುಬ್ ಅವರು ನೋವಿನಿಂದ ಕಿರುಚಿಕೊಂಡಾಗ, ಅವರ ಅಣ್ಣ ಅಕ್ಬರ್ ಹಾಗೂ ಅಳಿಯ ಮಕ್ಬುಲ್ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಆರೋಪಿಗಳು ಕೊಲೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಆರೋಪಿಗಳು ಅಯುಬ್ ಅವರ ಮನೆ ಸಮೀಪ ಬೈಕ್‌ನಲ್ಲಿ ಬಂದು “ಇದೇ ಮನೆ” ಎಂದು ಕೂಗಿ ಹೋಗಿರುವುದಾಗಿ ತಿಳಿದುಬಂದಿದೆ.
ಇದಲ್ಲದೆ, ಪಿರ್ಯಾದಿದಾರರ ಮೊಬೈಲ್‌ಗೆ ಕೋಡಿ ನಿವಾಸಿ ಶಾಕೀರ್ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026 ಅಡಿಯಲ್ಲಿ BNS ಕಾಯ್ದೆಯ ಕಲಂ 189(2), 191(2), 126(2), 352, 351(2) ಹಾಗೂ 190 ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.