

ಡೈಲಿವಾರ್ತೆ:26/ಮಾರ್ಚ್/2026


ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ – ವೈದ್ಯಕೀಯ ಕಾಲೇಜು ಪ್ರೊಫೆಸರ್‌ಗೆ ಚಪ್ಪಲಿ ಸೇವೆ

ನೆಲಮಂಗಲ: ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕಾದ ಪ್ರೊಫೆಸರ್ ಒಬ್ಬರು ತರಗತಿಯಲ್ಲೇ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ನಿವೇದನೆ (Propose) ಮಾಡಿ ವಿದ್ಯಾರ್ಥಿಗಳಿಂದಲೇ ಧರ್ಮದೇಟು ತಿಂದಿರುವ ನಾಚಿಕೆಗೇಡಿನ ಘಟನೆ ನೆಲಮಂಗಲ ತಾಲೂಕಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಘಟನೆಯ ವಿವರ:
ತರಗತಿ ನಡೆಯುತ್ತಿದ್ದ ವೇಳೆ ಪ್ರೊಫೆಸರ್ ಅಬ್ದುಲ್ ಎಂಬುವವರು ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ, ಎಲ್ಲರೆದುರೇ ಪ್ರಪೋಸ್ ಮಾಡಿದ್ದಾರೆ. ಪ್ರೊಫೆಸರ್‌ನ ಈ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ, ತರಗತಿಯಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿನ ಚಕಮಕಿ ಮಿತಿಮೀರಿದಾಗ ವಿದ್ಯಾರ್ಥಿನಿ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ.
ಕ್ಯಾಂಪಸ್‌ನಲ್ಲಿ ಆಕ್ರೋಶ:
ಪ್ರೊಫೆಸರ್ ವರ್ತನೆಯಿಂದ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಕೂಡಲೇ ದಾಳಿ ನಡೆಸಿದ್ದಾರೆ. ಕಾಲೇಜು ಆವರಣದಲ್ಲೇ ಅಬ್ದುಲ್‌ನನ್ನು ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು, ಅವರು ಕಾರು ಏರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗಲೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಪ್ರೊಫೆಸರ್ ವಿದ್ಯಾರ್ಥಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಭಾಷಣೆಯ ಸಾರಾಂಶ:
ವಿದ್ಯಾರ್ಥಿನಿ ಹಾಗೂ ಪ್ರೊಫೆಸರ್ ನಡುವೆ ನಡೆದ ಸಂಭಾಷಣೆ ಹೀಗಿದೆ:
ಪ್ರೊಫೆಸರ್: “ನಿಮ್ಮ ಬ್ಯಾಚ್‌ನ ಹುಡುಗಿಯ ಮೇಲಿರುವ ಪ್ರೀತಿಯನ್ನು ವಿರೋಧಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅದಕ್ಕೆ ಪ್ರಪೋಸ್ ಮಾಡುತ್ತಿದ್ದೇನೆ. ನಿಮ್ಮ ಬ್ಯಾಚ್‌ನ ಪ್ರಮುಖ ವಿದ್ಯಾರ್ಥಿನಿಗೆ ನಾನು ಐ ಲವ್ ಯೂ ಹೇಳುತ್ತಿದ್ದೇನೆ, ಎಲ್ಲರೂ ಚಾಕೊಲೇಟ್ ಪಡೆದುಕೊಳ್ಳಿ.”
ವಿದ್ಯಾರ್ಥಿನಿ: “ನೀವೇನಾದರೂ ಮಾತನಾಡಬೇಕಿದ್ದರೆ ಪ್ರಿನ್ಸಿಪಾಲ್ ಬಳಿ ಬನ್ನಿ, ಇಡೀ ಬ್ಯಾಚ್ ನಿಮ್ಮ ಜೊತೆ ಬರುತ್ತದೆ. ಅಸಲಿಗೆ ನಾನು ನಿಮಗೆ ಯಾವಾಗ ಪ್ರಪೋಸ್ ಮಾಡಿದೆ?”
ಪ್ರೊಫೆಸರ್: “ಅದಕ್ಕೆ ಸಿಸಿಟಿವಿ ಸಾಕ್ಷಿಯಿದೆ, ನಾನು ನಾಳೆ ನಿನ್ನ ಜೊತೆ ಮಾತನಾಡುತ್ತೇನೆ.”
ವಿದ್ಯಾರ್ಥಿನಿ: “ನನಗೆ ನಿಮ್ಮ ಜೊತೆ ಮಾತನಾಡಲು ಇಷ್ಟವಿಲ್ಲ, ಮೊದಲು ಸಾಕ್ಷಿ ತೋರಿಸಿ.”
ಈ ಘಟನೆಯು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಯಲ್ಲಿ ಇಂತಹ ಘಟನೆ ನಡೆದಿರುವುದು ಪೋಷಕರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.