ಡೈಲಿವಾರ್ತೆ:26/ಮಾರ್ಚ್/2026

ದಾವಣಗೆರೆ ದಕ್ಷಿಣ ಉಪಸಮರ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ – ಸಂಧಾನಕ್ಕೆ ಬಗ್ಗದ ಸಾದಿಕ್ ಪೈಲ್ವಾನ್

​ದಾವಣಗೆರೆ: ರಾಜ್ಯದ ಉಪಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ವಿರುದ್ಧ ಬಂಡಾಯವೆದ್ದಿರುವ ಸಾದಿಕ್ ಪೈಲ್ವಾನ್, ಹೈಕಮಾಂಡ್ ನಾಯಕರ ಸಂಧಾನಕ್ಕೂ ಮಣಿಯದೆ ಅಖಾಡದಲ್ಲಿ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

​ನಾಯಕರ ಸಂಧಾನ ವಿಫಲ:
​ನಾಮಪತ್ರ ಹಿಂಪಡೆಯಲು ಗುರುವಾರ (ಮಾರ್ಚ್ 26) ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ, ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಲು ಕಾಂಗ್ರೆಸ್ ಹಿರಿಯ ನಾಯಕರಾದ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಈ ಸಂಧಾನ ಸಭೆಯು ಯಾವುದೇ ಫಲ ನೀಡಲಿಲ್ಲ. ನಾಯಕರು ಮನೆಗೆ ಆಗಮಿಸುತ್ತಿದ್ದಂತೆಯೇ ಸಾದಿಕ್ ಬೆಂಬಲಿಗರು “ಕಾಂಗ್ರೆಸ್ ಗೋ ಬ್ಯಾಕ್” ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

​ಪಟ್ಟು ಹಿಡಿದ ಪೈಲ್ವಾನ್:
​ಸಂಧಾನದ ವೇಳೆ ಸಾದಿಕ್ ಪೈಲ್ವಾನ್ ಅವರು ನಾಮಪತ್ರ ವಾಪಸ್ ಪಡೆಯಲು ಖಡಾಖಂಡಿತವಾಗಿ ನಿರಾಕರಿಸಿದರು. “ರಾಜ್ಯ ನಾಯಕರು ಮೊದಲೇ ಬಂದು ನಮ್ಮ ಅಹಿಂದ ಮುಖಂಡರ ಜೊತೆ ಚರ್ಚಿಸಬೇಕಿತ್ತು. ಈಗ ಕಾಲ ಮಿಂಚಿ ಹೋಗಿದೆ, ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯಗೊಂಡಿರುವುದ ರಿಂದ, ಅವರು ಪಕ್ಷೇತರ ಅಥವಾ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುವುದು ಈಗ ಅಧಿಕೃತವಾಗಿದೆ.

​ಕಾಂಗ್ರೆಸ್‌ಗೆ ಬಹಿರಂಗ ಸವಾಲು:
​ಮಾಧ್ಯಮಗಳೊಂದಿಗೆ ಮಾತನಾಡಿದ ಸಾದಿಕ್ ಪೈಲ್ವಾನ್, “ನನಗೆ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೂ ಪ್ರತಿಸ್ಪರ್ಧಿಯಲ್ಲ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ” ಎಂದು ಸವಾಲು ಎಸೆದಿದ್ದಾರೆ.

​ರಾಜಕೀಯ ಲೆಕ್ಕಾಚಾರ:
​ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿದ್ದು, ಸಾದಿಕ್ ಪೈಲ್ವಾನ್ ಅವರ ಸ್ಪರ್ಧೆಯು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಮತಬ್ಯಾಂಕ್‌ಗೆ ಪೆಟ್ಟು ನೀಡುವ ಸಾಧ್ಯತೆಯಿದೆ. ಈ ಬಂಡಾಯವು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಗೆ ನಾಂದಿ ಹಾಡಿದ್ದು, ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.