ಡೈಲಿವಾರ್ತೆ:26/ಮಾರ್ಚ್/2026

ಬೆಳ್ತಂಗಡಿ: ಜಾತ್ರೆಯಲ್ಲಿ ಅನ್ಯಕೋಮಿನ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ – ಬಜರಂಗದಳದ ಕಾರ್ಯಕರ್ತರಿಬ್ಬರ ಬಂಧನ

​ಬೆಳ್ತಂಗಡಿ: ಉಜಿರೆಯ ದೇವಸ್ಥಾನವೊಂದರ ಜಾತ್ರೆಯ ಸಂದರ್ಭದಲ್ಲಿ ಅನ್ಯಕೋಮಿನ ಅಪ್ರಾಪ್ತ ಬಾಲಕನನ್ನು ಅಪಹರಿಸಿ, ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉಜಿರೆ ಗ್ರಾಮದ ಪೆರ್ಲ ನಿವಾಸಿ ರಮೇಶ್ ಪೂಜಾರಿ (43) ಹಾಗೂ ನಡ ಗ್ರಾಮದ ಸೂರ್ಯ ನಿವಾಸಿ ಗೌರವ್ ಶೆಟ್ಟಿ (25) ಬಂಧಿತ ಆರೋಪಿಗಳು.
ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

​ಘಟನೆಯ ಹಿನ್ನೆಲೆ:
ಕಳೆದ ಮಾರ್ಚ್ 11ರಂದು ಉಜಿರೆಯ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಅನ್ಯಕೋಮಿನ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತರೊಂದಿಗೆ ತೆರಳಿದ್ದನು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಗೌರವ್ ಶೆಟ್ಟಿ, ರಮೇಶ್ ಪೂಜಾರಿ ಹಾಗೂ ಇತರರು ಸೇರಿ ಬಾಲಕನನ್ನು ಅಡ್ಡಗಟ್ಟಿ
ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಅಪಹರಿಸಿಕೊಂಡು ಹೋದ ತಂಡವು, ಅಲ್ಲಿ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಹಲ್ಲೆಯ ದೃಶ್ಯಗಳನ್ನು ವೀಡಿಯೋ ಚಿತ್ರೀಕರಿಸಿಕೊಂಡ ಆರೋಪಿಗಳು, ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತಮ್ಮ ಮಗನ ಮೇಲಾದ ಹಲ್ಲೆಯ ಕುರಿತು ಬಾಲಕನ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಸದ್ಯ ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗಾಗಿ ಹುಡುಕಾಟ ಮುಂದುವರಿದಿದೆ.

​ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.