ಡೈಲಿವಾರ್ತೆ:26/ಮಾರ್ಚ್/2026

ಸಾಲಿಗ್ರಾಮ: ರಥಬೀದಿಯಲ್ಲಿ ‘ಮಾತೃಶ್ರೀ ಸೈಬರ್’ ಕೇಂದ್ರ ಶುಭಾರಂಭ

​ಸಾಲಿಗ್ರಾಮ: “ಜನರ ಸೇವೆಯೇ ಜನಾರ್ದನನ ಸೇವೆ ಎನ್ನುವ ಪವಿತ್ರ ಭಾವನೆಯೊಂದಿಗೆ ಸಂಸ್ಥೆ ಮುನ್ನಡೆಯಲಿ” ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಧರ್ಮದರ್ಶಿ ಹಾಗೂ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ತಾರಾನಾಥ್ ಹೊಳ್ಳ ಹಾರೈಸಿದರು.
​ಸಾಲಿಗ್ರಾಮದ ರಥಬೀದಿಯಲ್ಲಿರುವ ಪವಮಾನ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ‘ಮಾತೃಶ್ರೀ ಸೈಬರ್’ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

​ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಕೇಂದ್ರಕ್ಕೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿನಿಮಾ ಮತ್ತು ರಂಗಭೂಮಿ ಕಲಾವಿದ ರಘು ಪಾಂಡೇಶ್ವರ್, ಯಕ್ಷಗಾನ ಹಾಗೂ ಸಿನಿಮಾ ನಟ ಕೋಟ ಶಿವಾನಂದ, ನಿವೃತ್ತ ಬ್ಯಾಂಕ್ ಉದ್ಯೋಗಿ ಕೇಶವ ನೈರಿ ಮತ್ತು ಸಮಾಜ ಸೇವಕ ನಾಗರಾಜ್ ಗಾಣಿಗ ಅವರು ಜಂಟಿಯಾಗಿ ದೀಪ ಬೆಳಗಿಸಿ ಶುಭ ಕೋರಿದರು.

​ವಿದ್ಯಾರ್ಥಿಗಳಿಗೆ ಹಾಗೂ ಅಶಕ್ತರಿಗೆ ವಿಶೇಷ ಸೇವೆ:
​ಸಂಸ್ಥೆಯ ಮಾಲೀಕರಾದ ರಮೇಶ್ ಮೆಂಡನ್ ಅವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, “ನಮ್ಮ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೈಬರ್ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿಶೇಷವಾಗಿ, ಬರಲು ಸಾಧ್ಯವಾಗದ ಅಶಕ್ತರಿಗೆ ಅಗತ್ಯವಿದ್ದಲ್ಲಿ ಅವರ ಮನೆಗೇ ಭೇಟಿ ನೀಡಿ ತಾಂತ್ರಿಕ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದ್ದೇವೆ” ಎಂದು ಸಂಸ್ಥೆಯ ಸೇವಾ ಮನೋಭಾವವನ್ನು ಹಂಚಿಕೊಂಡರು.

​ಕಾರ್ಯಕ್ರಮದ ಯಶಸ್ಸಿಗೆ ಲೋಹಿತ್ ಕುಂದರ್, ನಿರ್ದೇಶ್ ಮೆಂಡನ್ ಹಾಗೂ ಶ್ರೀಮತಿ ಮಾಯಾ ಲೋಕೇಶ್ ಸಹಕರಿಸಿದರು. ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.