

ಡೈಲಿವಾರ್ತೆ:27/ಮಾರ್ಚ್/2026


ಭಟ್ಕಳ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ – ಚಾಕು ಇರಿತ, ಮೂವರ ಬಂಧನ

ಭಟ್ಕಳ: ವಾಹನದ ಹಾರ್ನ್ ಮಾಡುವ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳವೊಂದು ಹಿಂಸಾಚಾರಕ್ಕೆ ತಿರುಗಿ, ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದ ಘಟನೆ ಭಟ್ಕಳದ ಜಲ್ಲಿ ರಸ್ತೆ ಬಳಿ ಗುರುವಾರ ರಾತ್ರಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಗುರುವಾರ ಸಂಜೆ ಜಲ್ಲಿ ಬೀಚ್ ರಸ್ತೆಯಲ್ಲಿ ಬೊಲೆರೊ ವಾಹನದ ಹಾರ್ನ್ ಸೌಂಡ್ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಜಲ್ಲಿ ದೇವಿನಗರ ಕ್ರಾಸ್ ಬಳಿ ಆರೋಪಿಗಳಾದ ಮುಹಮ್ಮದ್ ತಾಹಿರ್, ಕೈಫ್ ಕಟ್ಟಿ ಹಾಗೂ ತಂಡವು ಸ್ಕೂಟರ್ ತಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ದಾಳಿಯಲ್ಲಿ ತೌಸೀಫ್ ಖತೀಬ್ ಮತ್ತು ಮುಹಮ್ಮದ್ ಜಾಫರ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ವೇಳೆ ಬೆಲೆಬಾಳುವ ಗಡಿಯಾರ ಹಾಗೂ ನಗದು ಕಳೆದುಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಸಾವಿರಾರು ಜನರು ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಪರಿಸ್ಥಿತಿ ಅರಿತ ಡಿವೈಎಸ್ಪಿ ಗಿರೀಶ್ ಹಾಗೂ ಸಿಪಿಐ ದಿವಾಕರ್ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.
ಪಿಎಸ್‌ಐ ನವೀನ್ ನಾಯಕ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಾದ ಮುಹಮ್ಮದ್ ತಾಹಿರ್, ಮುಹಮ್ಮದ್ ಮೋಲಾ ಮತ್ತು ಮುಹಮ್ಮದ್ ಖಾಸಿಂ ಎಂಬುವವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.