

ಡೈಲಿವಾರ್ತೆ:28/ಮಾರ್ಚ್/2026


ರಿಪ್ಪನ್‌ಪೇಟೆ: ಕಾಲುಜಾರಿ ಕೆರೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ದುರ್ಮರಣ

ರಿಪ್ಪನ್‌ಪೇಟೆ: ಟ್ಯೂಷನ್ ಮುಗಿಸಿ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬರುವೆ ಗ್ರಾಮದಲ್ಲಿ ನಡೆದಿದೆ.
ರಿಪ್ಪನ್‌ಪೇಟೆಯ ಮದೀನಾ ಕಾಲೋನಿ ನಿವಾಸಿ ಮಹಮ್ಮದ್ ತಮೀಮ್ ಬಿನ್ ತಾಹಿರ್ ಹುಸೇನ್ ಮೃತಪಟ್ಟ ದುರ್ದೈವಿ.
ಈತ ಪಟ್ಟಣದ ಚೌಡೇಶ್ವರಿ ಬೀದಿಯಲ್ಲಿರುವ ಟ್ಯೂಷನ್ ಕೇಂದ್ರಕ್ಕೆ ತೆರಳಿದ್ದನು. ಪಾಠ ಮುಗಿದ ಬಳಿಕ ತನ್ನ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದ ಪ್ರದೇಶಕ್ಕೆ ವಿಹಾರಕ್ಕೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗದ್ದೆಯ ಪಕ್ಕದಲ್ಲಿದ್ದ ಕೆರೆಯ ಏರಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಹಮ್ಮದ್ ತಮೀಮ್ ಆಯತಪ್ಪಿ ಆಳವಾದ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣವೇ ಸ್ಥಳೀಯರು ಹಾಗೂ ಸ್ನೇಹಿತರು ಬಾಲಕನನ್ನು ನೀರಿನಿಂದ ಹೊರತೆಗೆದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ ಸಹ, ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತನ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.