

ಡೈಲಿವಾರ್ತೆ:28/ಮಾರ್ಚ್/2026


ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದ ಪಿಇಎಸ್ ವಿವಿ ಪ್ರೊಫೆಸರ್ ಅಮಾನತು

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ನಿಂದನೆಯ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ತರಗತಿಯಲ್ಲಿ ಪಾಠ ಮಾಡುವ ವೇಳೆ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ‘ಭಯೋತ್ಪಾದಕ’ ಎಂದು ಸಂಬೋಧಿಸಿದ ಆರೋಪದ ಮೇಲೆ ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ ಅವರನ್ನು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಅಮಾನತುಗೊಳಿಸಿದೆ.
ನಡೆದಿದ್ದೇನು?
ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ. ತರಗತಿಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗದ್ದಲದಿಂದ ಅಸಮಾಧಾನಗೊಂಡ ಪ್ರೊಫೆಸರ್ ದೇಶಪಾಂಡೆ, ಮುಸ್ಲಿಂ ಸಮುದಾಯದ ವಿದ್ಯಾರ್ಥಿಯೊಬ್ಬನನ್ನು ಗುರಿಯಾಗಿಸಿಕೊಂಡು “ನೀವೆಲ್ಲಾ ಭಯೋತ್ಪಾದಕರು” ಎಂಬ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ.
ವೈರಲ್ ಆದ ವಿಡಿಯೋ
ಪ್ರೊಫೆಸರ್ ಅವರ ಈ ವರ್ತನೆಯನ್ನು ತರಗತಿಯಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ನೀಡಬೇಕಾದ ಗುರುವೇ ವಿದ್ಯಾರ್ಥಿಗಳ ವಿರುದ್ಧ ಇಂತಹ ತಾರತಮ್ಯದ ಮತ್ತು ದ್ವೇಷಪೂರಿತ ಮಾತುಗಳನ್ನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾನೂನು ಕ್ರಮ ಮತ್ತು ಅಮಾನತು
ಘಟನೆಯನ್ನು ಖಂಡಿಸಿರುವ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI), ಈ ಸಂಬಂಧ ದೂರು ದಾಖಲಿಸಿದೆ.
ಪ್ರಕರಣದ ಗಂಭೀರತೆಯನ್ನು ಅರಿತ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಕೂಡಲೇ ಕಾರ್ಯಪ್ರವೃತ್ತವಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿ ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕ್ಯಾಂಪಸ್‌ನಲ್ಲಿ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ವಿವಿ ಸ್ಪಷ್ಟಪಡಿಸಿದೆ.