

ಡೈಲಿವಾರ್ತೆ:29/ಮಾರ್ಚ್/2026


ಕಾರ್ಕಳ: ತಲವಾರು ತೋರಿಸಿ ಜಾನುವಾರು ಕಳವು ಪ್ರಕರಣ – ಆರೋಪಿಗಳ ಜಾಮೀನು ರದ್ದು , ಕೋಕಾ ಕಾಯ್ದೆ ಅಡಿ ಆರೋಪಿಗಳ ಮರುಬಂಧನ

ಕಾರ್ಕಳ: ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಜಾನುವಾರು ಕಳವು ಪ್ರಕರಣದಲ್ಲಿ ಪೊಲೀಸರ ತನಿಖೆ ತೀವ್ರಗೊಂಡಿದ್ದು, ಆರೋಪಿಗಳ ವಿರುದ್ಧ ಇದೀಗ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಜಯಶ್ರೀ ಪೂಜಾರಿ ಅವರ ಮನೆಯ ಹಟ್ಟಿಗೆ ನುಗ್ಗಿದ ಆರೋಪಿಗಳು, ಜಾನುವಾರುಗಳನ್ನು ಕಳವು ಮಾಡಲು ಯತ್ನಿಸುವ ವೇಳೆ ತಲವಾರು ತೋರಿಸಿ ಬೆದರಿಕೆ ಹಾಕಿದ್ದರು. ಬಳಿಕ ಹಟ್ಟಿಯಲ್ಲಿದ್ದ ಮೂರು ಜಾನುವಾರುಗಳ ಹಗ್ಗಗಳನ್ನು ಕತ್ತರಿಸಿ, ಅವುಗಳನ್ನು ವಾಹನದಲ್ಲಿ ಸಾಗಿಸಿ ಕಳವು ಮಾಡಿರುವುದು ಮಾತ್ರವಲ್ಲದೆ, ಬಳಿಕ ವಧೆ ಮಾಡಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಳವಾದ ಜಾನುವಾರುಗಳ ಮೌಲ್ಯವು ಸುಮಾರು 35 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2025ರಲ್ಲಿ BNS ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಕಾರ್ಕಳ ಸಿಪಿಐ ಅವರ ನೇತೃತ್ವದಲ್ಲಿ ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29) ಮತ್ತು ನಾಸಿರ್ ಅಲಿಯಾಸ್ ಮೊಹಮ್ಮದ್ ನಾಸಿರ್ (28) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಆದರೆ ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತವಾಗಿ ಈ ಕೃತ್ಯ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಆರೋಪಿಗಳ ಜಾಮೀನು ರದ್ದುಪಡಿಸಿ, ಮೊಹಮ್ಮದ್ ಯೂನಿಸ್, ನಾಸಿರ್ ಹಾಗೂ ನಾಲ್ಕನೇ ಆರೋಪಿ ಶೌಕತ್ ಆಲಿ (36) ಅವರನ್ನು ಮರುಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.