

ಡೈಲಿವಾರ್ತೆ:29/ಮಾರ್ಚ್/2026


ಸಾಲಿಗ್ರಾಮ: ಬೈಕ್‌ಗೆ ಕಾರು ಡಿಕ್ಕಿ – ಸವಾರ ಗಂಭೀರ ಗಾಯ

ಕೋಟ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಸರ್ಕಲ್ ಬಳಿ ಭಾನುವಾರ ಸಂಜೆ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ನಿವಾಸಿ ಪರಮೇಶ್ವರ್ ಭಟ್ ಅಪಘಾತದಲ್ಲಿ ಗಾಯಗೊಂಡ ಸವಾರ ಎಂದು ಗುರುತಿಸಲಾಗಿದೆ.
ಪರಮೇಶ್ವರ್ ಭಟ್ ಅವರು ಸರ್ವಿಸ್ ರಸ್ತೆಯ ಮುಖಾಂತರ ಬಂದು ಸಾಲಿಗ್ರಾಮ ಪೇಟೆಗೆ ತೆರಳಲು ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಉಡುಪಿಯಿಂದ ಕುಂದಾಪುರದ ಕಡೆಗೆ ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ:
ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಈ ಸರ್ಕಲ್ ಈಗ ‘ಡೆತ್ ಝೋನ್’ ಆಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ನವಯುಗ ಕಂಪನಿಯಾಗಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
”ಅಪಘಾತ ನಡೆದಾಗ ವಾಹನ ತೆರವುಗೊಳಿಸಲು ನವಯುಗ ಕಂಪನಿಯು ಟೋಯಿಂಗ್ ವಾಹನವನ್ನೂ ಒದಗಿಸುತ್ತಿಲ್ಲ. ಅನಿವಾರ್ಯವಾಗಿ ಸ್ಥಳೀಯರೇ ವಾಹನಗಳನ್ನು ದೂಡಿಕೊಂಡು ರಸ್ತೆ ಬದಿಗೆ ಸರಿಸಬೇಕಾದ ಪರಿಸ್ಥಿತಿ ಇದೆ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.