

ಡೈಲಿವಾರ್ತೆ:30/ಮಾರ್ಚ್/2026


ಉಡುಪಿ: ಮಧ್ಯರಾತ್ರಿ ಹಣದ ವಿಚಾರಕ್ಕೆ ಯುವಕನ ಮೇಲೆ ಗುಂಪು ಹಲ್ಲೆ, ಜೀವ ಬೆದರಿಕೆ

ಉಡುಪಿ: ನಿಟ್ಟೂರು ಸಮೀಪದ ಅಡ್ಕದ ಕಟ್ಟೆ ಬಳಿಯ ದೈವಸ್ಥಾನದ ಕೋಲದಿಂದ ಮನೆಗೆ ಹಿಂದಿರುಗುತ್ತಿದ್ದ ಯುವಕನ ಮೇಲೆ ಐವರು ಯುವಕರ ಗುಂಪು ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ಲಾಟ್ ನಂ. 505, ಇನ್‌ಚೆಕ್ ಸಿಟಿ ಬಿಲ್ಡಿಂಗ್, ಕೊರಂಗ್ರಪಾಡಿ ಗ್ರಾಮದ ನಿವಾಸಿ ಈಶಾನ್ ಶೆಟ್ಟಿ (19) ದಾಳಿ ಗುರಿಯಾದ ಯುವಕ.
ದಿನಾಂಕ 28ರಂದು ರಾತ್ರಿ ದೈವಸ್ಥಾನದ ಕೋಲ ನೋಡಲು ಹೋಗಿದ್ದ ಈಶಾನ್ ಶೆಟ್ಟಿ, 29ರಂದು ಬೆಳಗಿನ ಜಾವ ಸುಮಾರು 1:30 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಈ ವೇಳೆ ಗ್ರೇ ಬಣ್ಣದ ಬೊಲೆರೋ ಕಾರಿನಲ್ಲಿ ಬಂದ ಐವರು ಆರೋಪಿಗಳು ಈಶಾನ್ ಅವರ ಬೈಕ್ ಅಡ್ಡಗಟ್ಟಿ, ಪರಿಚಿತನಾದ ಚರಣ್ ಎಂಬಾತನು “ನಿನ್ನ ತಮ್ಮ ಕೊಡಬೇಕಾದ ಹಣವನ್ನು ನೀನು ಕೊಡಬೇಕು” ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಈಶಾನ್ ಅವರನ್ನು ಬೈಕ್‌ನಲ್ಲೇ ಹಿಂಬದಿ ಕುಳಿತುಕೊಂಡು ಸಮೀಪದ ಗ್ರೌಂಡ್‌ಗೆ ಕರೆದುಕೊಂಡು ಹೋಗಲಾಗಿದೆ.
ಅಲ್ಲಿ ಚರಣ್ ಹಾಗೂ ಅವನೊಂದಿಗೆ ಬಂದ ಇತರ ಆರೋಪಿಗಳು ಸೇರಿ ಈಶಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖ, ತಲೆ, ಎದೆ ಹಾಗೂ ಬೆನ್ನಿಗೆ ಕೈಯಿಂದ ಗುದ್ದಿದ್ದು, ಚಿತ್ತರಂಜನ್ ಎಂಬಾತನು ಡ್ರ್ಯಾಗರ್ ಹ್ಯಾಂಡಲ್‌ನಿಂದ ಹೊಡೆದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಇನ್ನೂ ಆರೋಪಿಗಳಾದ ಧ್ಯಾನ್, ಪ್ರಭು ಮತ್ತು ಯೋಗೀಶ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ಈಶಾನ್ ಅವರ ಮೊಬೈಲ್, ಮೋಟಾರ್ ಸೈಕಲ್ ಹಾಗೂ ಹೆಲ್ಮೆಟ್ ವಶಪಡಿಸಿಕೊಂಡು, “ಹಣ ಕೊಟ್ಟು ತೆಗೆದುಕೊಂಡು ಹೋಗು, ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಕಲಂಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.