ಡೈಲಿವಾರ್ತೆ:30/ಮಾರ್ಚ್/2026

ಭದ್ರಾವತಿ| ಸೇತುವೆಯಿಂದ ಹಳ್ಳಕ್ಕೆ ಬಿದ್ದ ಖಾಸಗಿ ಬಸ್, ಮೂವರಿಗೆ ಗಂಭೀರ ಗಾಯ

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಾಗೇಹಳ್ಳದ ಬಳಿ ಖಾಸಗಿ ಬಸ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಹಳ್ಳಕ್ಕೆ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ದಾವಣಗೆರೆಯಿಂದ ಭದ್ರಾವತಿಗೆ ಪ್ರಯಾಣಿಸುತ್ತಿದ್ದ ಈ ಬಸ್‌ನಲ್ಲಿ ಚಾಲಕ ಹಾಗೂ ಕಂಡಕ್ಟರ್ ಸೇರಿ ಒಟ್ಟು ಸುಮಾರು 35 ಮಂದಿ ಪ್ರಯಾಣಿಕರು ಇದ್ದರು. ಮಧ್ಯಾಹ್ನ ಸುಮಾರು 12:30ರ ಸುಮಾರಿಗೆ ಕಾಗೇಹಳ್ಳದ ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಅಪಘಾತದ ಪರಿಣಾಮ ಮೂವರು ಪ್ರಯಾಣಿಕರಿಗೆ ಕೈ ಹಾಗೂ ಕಾಲು ಮುರಿದಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ತಕ್ಷಣ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.