ಡೈಲಿವಾರ್ತೆ:30/ಮಾರ್ಚ್/2026

ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಭಸ್ಮ: ಟ್ರಂಪ್ ಖಡಕ್ ಎಚ್ಚರಿಕೆ

​ವಾಷಿಂಗ್ಟನ್: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ತಕ್ಷಣವೇ ಮುಕ್ತಗೊಳಿಸದಿದ್ದರೆ ಆ ದೇಶದ ಮೇಲೆ ಹಿಂದೆಂದೂ ಕಾಣದ ಭೀಕರ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

​ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಇರಾನ್ ವಿರುದ್ಧ ಗುಡುಗಿರುವ ಟ್ರಂಪ್, “ತಕ್ಷಣವೇ ವ್ಯವಹಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನಿನ ಎಲ್ಲಾ ವಿದ್ಯುತ್ ಉತ್ಪಾದನಾ ಸ್ಥಾವರಗಳು, ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪಗಳನ್ನು ಸ್ಫೋಟಿಸಿ ಸಂಪೂರ್ಣವಾಗಿ ನಾಶಮಾಡುತ್ತೇನೆ,” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ, ಆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಮೂಲಸೌಕರ್ಯ ಘಟಕಗಳನ್ನು ಧೂಳೀಪಟ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.

ಕಳೆದ 47 ವರ್ಷಗಳಿಂದ ಇರಾನಿನ ಭಯೋತ್ಪಾದನಾ ಆಡಳಿತದಿಂದಾಗಿ ನಮ್ಮ ಸೈನಿಕರು ಹಾಗೂ ಅಮಾಯಕರು ಬಲಿಯಾಗಿದ್ದಾರೆ. ಇದು ಅವರಿಗೆ ನಾವು ನೀಡಲಿರುವ ತಕ್ಕ ಶಾಸ್ತಿ ಎಂದು ಟ್ರಂಪ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

​ಅಂತಿಮ ಗಡುವು: ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಆಡಳಿತವು ಗಂಭೀರ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಘನಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಟ್ರಂಪ್ ಸಂದೇಶದ ಸಾರವಾಗಿದೆ.

ಇಲ್ಲಿಯವರೆಗೆ ನಾವು ಉದ್ದೇಶಪೂರ್ವಕವಾಗಿ ಇರಾನಿನ ಪ್ರಮುಖ ಘಟಕಗಳ ಮೇಲೆ ದಾಳಿ ನಡೆಸಿಲ್ಲ. ಆದರೆ ಇನ್ನು ಮುಂದೆ ಅಂತಹ ರಿಯಾಯಿತಿ ಇರುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.