ಡೈಲಿವಾರ್ತೆ:31/ಮಾರ್ಚ್/2026

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಭೀಕರ ವೈಮಾನಿಕ ದಾಳಿ: ಇಸ್ಫಹಾನ್ ನಗರದಲ್ಲಿ ಸರಣಿ ಸ್ಫೋಟ

​ತೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಮಂಗಳವಾರ (ಮಾ. 31) ಮುಂಜಾನೆ ಇರಾನ್‌ನ ಪ್ರಮುಖ ನಗರವಾದ ಇಸ್ಫಹಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಭೀಕರ ವೈಮಾನಿಕ ದಾಳಿ ನಡೆಸಿವೆ.

​ ಇಸ್ಫಹಾನ್‌ನಲ್ಲಿರುವ ಇರಾನ್‌ನ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಲಯ ಮತ್ತು ಮಿಲಿಟರಿ ಸ್ಥಾವರಗಳ ಮೇಲೆ ದಾಳಿ ನಡೆಸಿದೆ.

ಸ್ಫೋಟದ ತೀವ್ರತೆಗೆ ಇಡೀ ನಗರವೇ ನಡುಗಿದ್ದು, ಸರಣಿ ಸ್ಫೋಟಗಳಿಂದಾಗಿ ಆಕಾಶದಲ್ಲಿ ಬೆಂಕಿಯ ಉಂಡೆಗಳು ಗೋಚರಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಸ್ಫೋಟದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜಾಗತಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

​ತೀವ್ರಗೊಂಡ ಸಂಘರ್ಷ:
​ಸುಮಾರು 23 ಲಕ್ಷ ಜನಸಂಖ್ಯೆ ಹೊಂದಿರುವ ಇಸ್ಫಹಾನ್ ನಗರವು ಭದ್ರತಾ ದೃಷ್ಟಿಯಿಂದ ಇರಾನ್‌ಗೆ ಅತ್ಯಂತ ನಿರ್ಣಾಯಕವಾಗಿದೆ. ಇಲ್ಲಿನ ಪ್ರಸಿದ್ಧ ‘ಬದ್ರ್‘ (Badr) ಮಿಲಿಟರಿ ವಾಯುನೆಲೆಯ ಮೇಲೆ ನಡೆದಿರುವ ಈ ದಾಳಿಯು ಇರಾನ್‌ನ ರಕ್ಷಣಾ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇರಾನ್ ತನ್ನ ಭೂಗತ ಕೇಂದ್ರಗಳಲ್ಲಿ ಸುಮಾರು 540 ಕೆಜಿ ತೂಕದ ಸಂವರ್ಧಿತ ಯುರೇನಿಯಂ ಅನ್ನು ಸಂಗ್ರಹಿಸಿಟ್ಟಿದೆ ಎಂಬ ವರದಿಗಳ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

​ಟ್ರಂಪ್ ನೀಡಿದ್ದ ಎಚ್ಚರಿಕೆ:
​ವಿಶೇಷವೆಂದರೆ, ಈ ದಾಳಿಗೂ ಒಂದು ದಿನ ಮೊದಲು ಅಂದರೆ ಸೋಮವಾರವಷ್ಟೇ ಅಧ್ಯಕ್ಷ ಟ್ರಂಪ್ ಅವರು ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದರು.
​”ಇರಾನ್ ತಕ್ಷಣವೇ ಯುದ್ಧ ವಿರಾಮ ಒಪ್ಪಂದಕ್ಕೆ ಬರದಿದ್ದರೆ, ಆ ದೇಶದ ಇಂಧನ ಮೂಲಗಳು, ಪರಮಾಣು ಕೇಂದ್ರಗಳು ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂದು.

ಡೊನಾಲ್ಡ್ ಟ್ರಂಪ್
​ವಿವಾದದ ಹಿನ್ನೆಲೆ:

​ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯ ಅಂತಿಮ ಹಂತದಲ್ಲಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಪದೇ ಪದೇ ಆರೋಪಿಸುತ್ತಿವೆ. ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಣಾವಲು ಸಂಸ್ಥೆಯು ಈ ವರೆಗೆ ಈ ಆರೋಪವನ್ನು ದೃಢಪಡಿಸಿಲ್ಲ. ಕಳೆದ ವರ್ಷವೂ ಇರಾನ್‌ನ ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದ ಟ್ರಂಪ್, ಈಗಿನ ಕಾರ್ಯಾಚರಣೆಯ ಮೂಲಕ ಸಂಘರ್ಷವನ್ನು ನೇರ ಯುದ್ಧದ ಹಂತಕ್ಕೆ ಕೊಂಡೊಯ್ದಿದ್ದಾರೆ