ಡೈಲಿವಾರ್ತೆ:31/ಮಾರ್ಚ್/2026

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್ ಸ್ಫೋಟ: ಗೃಹಿಣಿ ಸ್ಥಿತಿ ಗಂಭೀರ!

​ಧಾರವಾಡ: ಪೆಟ್ರೋಲ್ ಅಭಾವದ ಭೀತಿಯಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್ ಸ್ಫೋಟಗೊಂಡು, ಗೃಹಿಣಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಭೀಕರ ಘಟನೆ ಜಿಲ್ಲೆಯ ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಗ್ರಾಮದ ಪೂರ್ಣಿಮಾ ಕಲ್ಲಪ್ಪ ಹಾದಿಮನಿ (32) ಎಂಬುವವರೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ದುರ್ದೈವಿ.

ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬ ವದಂತಿಯಿಂದಾಗಿ, ಮುಂಜಾಗ್ರತಾ ಕ್ರಮವಾಗಿ ಮನೆಯ ಫ್ರಿಡ್ಜ್ ಬಳಿ ಪೆಟ್ರೋಲ್ ಕ್ಯಾನ್ ಸಂಗ್ರಹಿಸಿಡಲಾಗಿತ್ತು. ಪೂರ್ಣಿಮಾ ಅವರು ಅಡುಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಏಕಾಏಕಿ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ.
​ಕ್ಷಣಾರ್ಧದಲ್ಲಿ ಇಡೀ ಮನೆಗೆ ಬೆಂಕಿ ಆವರಿಸಿದ್ದು, ಪೂರ್ಣಿಮಾ ಅವರು ಅಗ್ನಿಜಾಲದ ನಡುವೆ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಮೈದುನ ಯಲ್ಲಪ್ಪ ತಕ್ಷಣವೇ ಧಾವಿಸಿ ಅತ್ತಿಗೆಯನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯದ ವೇಳೆ ಯಲ್ಲಪ್ಪ ಅವರಿಗೂ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಮನೆಯ ಉಳಿದ ಸದಸ್ಯರು ಆ ಸಮಯದಲ್ಲಿ ಹೊರಗಡೆ ಕುಳಿತಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.

ಸುಮಾರು ಶೇ.80 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಪೂರ್ಣಿಮಾ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆ ಕಾರ್ಯಕ್ರಮಗಳಿಗೆ ರಥ ಓಡಿಸುವ ಉದ್ದೇಶದಿಂದಲೂ ಇವರು ಪೆಟ್ರೋಲ್ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
​ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗರಗ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.