ಡೈಲಿವಾರ್ತೆ:31/ಮಾರ್ಚ್/2026

ಬಾರ್ಕೂರು ಹೇರಾಡಿ ಕಳ್ಳತನ ಪ್ರಕರಣ: ಬ್ರಹ್ಮಾವರ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಖತರ್ನಾಕ್ ಕಳ್ಳನ ಬಂಧನ

​ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಬಾರ್ಕೂರು ಪರಿಸರದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯ ಭಾರಿ ಕಳ್ಳತನ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಮೂಲತಃ ಕೇರಳದವನಾದ ಪ್ರವೀಣ್ ಎನ್ನುವ ಈ ವ್ಯಕ್ತಿ ಪಡುಕೆರೆಯಲ್ಲಿ ವಾಸಿಸುತ್ತಿದ್ದು. ಈತ ಯಾವುದೇ ಕುರುಹು ಬಿಡದಂತೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಖತರ್ನಾಕ್ ಕಳ್ಳನನ್ನು ಬಂಧಿಸುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

​ಪ್ರಕರಣದ ಹಿನ್ನೆಲೆ:
​ಬಾರ್ಕೂರು ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ನಡೆದಿದ್ದ ಈ ಕಳ್ಳತನವು ಅತ್ಯಂತ ವ್ಯವಸ್ಥಿತವಾಗಿತ್ತು. ಕಳ್ಳನು ಯಾವುದೇ ಸುಳಿವು ಸಿಗದಂತೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹೊತ್ತೊಯ್ದಿದ್ದ. ಆರಂಭದಲ್ಲಿ ಪೊಲೀಸರು ಪರಿಸರದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಸಹ, ಕಳ್ಳನ ಯಾವುದೇ ಸುಳಿವು ಲಭ್ಯವಿರಲಿಲ್ಲ. ಇದು ತನಿಖಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

​ಆದರೆ ಎದೆಗುಂದದ ಬ್ರಹ್ಮಾವರ ಪೊಲೀಸ್ ತಂಡವು ಹದ್ದಿನ ಕಣ್ಣಿಟ್ಟು ತನಿಖೆಯನ್ನು ತೀವ್ರಗೊಳಿಸಿತ್ತು. ಕಳ್ಳನ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿದ ತಂಡವು, ಕೊನೆಗೂ ಆತನನ್ನು ಪತ್ತೆಹಚ್ಚಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಿಂದಾಗಿ ಬಾರ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.