

ಡೈಲಿವಾರ್ತೆ:31/ಮಾರ್ಚ್/2026


ಪ್ರವಾಸಿಗರ ಗಮನಕ್ಕೆ: ಮೋಜಿನ ಪ್ರವಾಸ ಸಾವು-ನೋವಿನ ಅಟ್ಟಹಾಸವಾಗದಿರಲಿ – ಸಮಾಜಸೇವಕ ಅಬ್ಬಾಸ್ ಕೋಡಿ

ಕರಾವಳಿ/ಕರ್ನಾಟಕ: ಬೇಸಿಗೆಯ ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಮತ್ತು ಶಾಲಾ-ಕಾಲೇಜುಗಳ ರಜೆಯ ಮೋಜನ್ನು ಅನುಭವಿಸಲು ರಾಜ್ಯದಾದ್ಯಂತ ಪ್ರವಾಸಿಗರು ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಈ ಸಂತೋಷದ ಕ್ಷಣಗಳು ದುರಂತದಲ್ಲಿ ಅಂತ್ಯವಾಗದಂತೆ ಪ್ರವಾಸಿಗರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.
ಜಲಮೂಲಗಳ ಬಳಿ ಇರಲಿ ಹೆಚ್ಚಿನ ನಿಗಾ:
ನಮ್ಮ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಸಮುದ್ರ ತೀರಗಳು, ನದಿಗಳು, ಕೆರೆ-ಕಟ್ಟೆಗಳು ಹಾಗೂ ಪ್ರಸಿದ್ಧ ಜೋಗ ಜಲಪಾತದಂತಹ ಪ್ರದೇಶಗಳಲ್ಲಿ ನೀರಿನ ಆಳದ ಅರಿವಿಲ್ಲದೆ ಇಳಿಯುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹಸಿರು ಪಾಚಿ ಕಟ್ಟಿದ ಕಲ್ಲುಗಳು, ನದಿಯ ಸುಳಿಗಳು ಮತ್ತು ಸಮುದ್ರದ ಅಲೆಗಳ ಅಬ್ಬರ ಕ್ಷಣಾರ್ಧದಲ್ಲಿ ಜೀವವನ್ನೇ ಬಲಿಪಡೆಯಬಹುದು.
ಕುಟುಂಬದ ಸುರಕ್ಷತೆ ನಿಮ್ಮ ಜವಾಬ್ದಾರಿ:
ಪ್ರವಾಸಕ್ಕೆ ಹೋದಾಗ ಕುಟುಂಬದ ಸದಸ್ಯರು, ವಿಶೇಷವಾಗಿ ಮಕ್ಕಳು ಮತ್ತು ಯುವಕರು ನೀರಿನಲ್ಲಿ ಆಟವಾಡುವಾಗ ಹಿರಿಯರು ಹೆಚ್ಚಿನ ನಿಗಾ ಇರಿಸಬೇಕು. ಸೆಲ್ಫಿ ವ್ಯಾಮೋಹ ಅಥವಾ ಅತಿಯಾದ ಸಾಹಸಕ್ಕೆ ಕೈಹಾಕಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬಾರದು. ಕೃಷಿ ಹೊಂಡಗಳು ಮತ್ತು ಜನರಿಲ್ಲದ ಕೆರೆಗಳ ಬಳಿ ಸ್ನಾನಕ್ಕೆ ಇಳಿಯುವುದು ಅತ್ಯಂತ ಅಪಾಯಕಾರಿ.
”ಪ್ರತಿಯೊಬ್ಬ ಪ್ರವಾಸಿಗರು ತಮ್ಮ ಸುರಕ್ಷತೆಯ ಬಗ್ಗೆ ಜಾಗೃತೆ ವಹಿಸುವುದು ಉತ್ತಮ. ಸ್ವಲ್ಪ ಮೈಮರೆತರೂ ನಿಮ್ಮ ಜೀವಕ್ಕೆ ನೀವೇ ಅಪಾಯಕಾರಿಯಾಗುತ್ತೀರಿ. ಮೋಜಿನ ಪ್ರವಾಸವು ದುರಂತವಾಗಿ ಬದಲಾಗದಿರಲಿ.”
— ಅಬ್ಬಾಸ್ ಕೋಡಿ, ಸಮಾಜಸೇವಕರು