

ಡೈಲಿವಾರ್ತೆ:01/ಏಪ್ರಿಲ್ /2026


ಕೊರಗಜ್ಜನ ವೇಷ ಧರಿಸಿ ದೈವಕ್ಕೆ ಅಪಮಾನ; ಮದುಮಗ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲು

ಮಡಿಕೇರಿ: ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ತುಳುನಾಡಿನ ಪವಿತ್ರ ದೈವ ‘ಕೊರಗಜ್ಜ’ನ ವೇಷವನ್ನು ಅಣಕಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮದುಮಗ ಸೇರಿದಂತೆ ಹಲವು ಯುವಕರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಮುಸ್ಲಿಂ ಸಮುದಾಯದ ಯುವಕನ ಮದುವೆ ಸಮಾರಂಭದ ವೇಳೆ, ಮದುಮಗನಿಗೆ ಕೊರಗಜ್ಜನ ವೇಷವನ್ನು ಹೋಲುವಂತೆ ಅಲಂಕರಿಸಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ದೈವದ ಆಚರಣೆಗಳನ್ನು ಅಣಕಿಸುವಂತೆ ಅತಿರೇಕದ ವರ್ತನೆ ತೋರಲಾಗಿದೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ದೈವ ಭಕ್ತರ ಮತ್ತು ಹಿಂದೂ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೂರು ಮತ್ತು ಕಾನೂನು ಕ್ರಮ:
ದೈವ ಮತ್ತು ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳ ಮುಖಂಡರು ನಾಪೋಕ್ಲು ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ: ಅಬ್ದುಲ್ ರಾಶಿದ್, ಹನೀಫ್, ಲತೀಫ್, ಮೊಹಮ್ಮದ್ ಫೈಜಲ್ (ಮದುಮಗ), ಶಕೀರ್ ಹಾಗೂ ಬಶೀರ್ ಎಂಬವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಡಿವೈಎಸ್‌ಪಿ ಅವರಿಗೂ ಈ ಕುರಿತು ಪ್ರತ್ಯೇಕ ದೂರು ಸಲ್ಲಿಕೆಯಾಗಿದೆ.
”ನಮ್ಮ ಪೂರ್ವಜರ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳಿಗೆ ಪದೇ ಪದೇ ಧಕ್ಕೆ ತರಲಾಗುತ್ತಿದೆ. ಕೇವಲ ಕ್ಷಮೆಯಾಚನೆಯಿಂದ ಈ ವಿವಾದ ಮುಗಿಯುವುದಿಲ್ಲ. ಕಿಡಿಗೇಡಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು,” ಎಂದು ದೈವಾರಾಧಕರ ಸಂಘದ ಪ್ರಮುಖರು ಎಚ್ಚರಿಸಿದ್ದಾರೆ.
ಮದುಮಗನ ಕ್ಷಮೆಯಾಚನೆ:
ವಿವಾದ ತಾರಕಕ್ಕೇರುತ್ತಿದ್ದಂತೆ ವಿಡಿಯೋ ಬಿಡುಗಡೆ ಮಾಡಿರುವ ಮುಖ್ಯ ಆರೋಪಿ ಫೈಜಲ್, “ನಾವು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಯಾವುದೋ ಖಾಸಗಿ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಇದರಿಂದ ಯಾವುದೇ ಸಮುದಾಯದ ಭಾವನೆಗಳಿಗೆ ನೋವಾಗಿದ್ದರೆ ನಾನು ಹೃದಯಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ,” ಎಂದು ತಿಳಿಸಿದ್ದಾನೆ.
ಆದರೆ, ಈ ಕ್ಷಮೆಯಾಚನೆಯನ್ನು ತಿರಸ್ಕರಿಸಿರುವ ಸ್ಥಳೀಯರು ಮತ್ತು ದೈವ ಭಕ್ತರು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.