ಡೈಲಿವಾರ್ತೆ:01/ಏಪ್ರಿಲ್ /2026

ಬಂಟ್ವಾಳದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು: ಮಹಿಳೆ ಗಂಭೀರ ಗಾಯ – ಸೈಕಲ್ ಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ: ತಾಲ್ಲೂಕಿನಲ್ಲಿ ಬುಧವಾರ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿ ಒಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡರೆ, ಮತ್ತೊಂದು ಘಟನೆಯಲ್ಲಿ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.

ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಬಳಿಯ ಗುಳಿಗಜ್ಜ ಕಟ್ಟೆ ಸಮೀಪ ಸಂಭವಿಸಿದ ಅಪಘಾತವು ಉಳ್ಳಾಲ ತಾಲೂಕಿನ ಬೋಳಿಯಾರು ನಿವಾಸಿ ಭಾರತಿ (48) ಅವರು ರಸ್ತೆ ದಾಟಿ ಗುಳಿಗಜ್ಜ ಕಟ್ಟೆಗೆ ಹಣ ಹಾಕಲು ಹೆದ್ದಾರಿ ಅಂಚಿಗೆ ತಲುಪಿದ ವೇಳೆ, ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಭಾರತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಘಟನೆ ಬಿ.ಸಿ.ರೋಡ್ ಕೈಕಂಬದಲ್ಲಿ ಬೆಳಿಗ್ಗೆ ನಡೆದಿದೆ. ಪಿಕಪ್ ವಾಹನವು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ, ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ (45) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ಪಡೆದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾಧಿಕಾರಿ ಆದರ್ಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.