ಡೈಲಿವಾರ್ತೆ:05/ಏಪ್ರಿಲ್ /2026

ಗಿಳಿಯಾರಿನ ಶ್ರಮಜೀವಿಯುಗ ಅಂತ್ಯ: ‘ಗಾಡಿ ಕೂಸಣ್ಣ’ ಕೂಸ ಪೂಜಾರಿ ವಿಧಿವಶ

ಕೋಟ: ರಸ್ತೆಗಳಿಲ್ಲದ, ವಾಹನಗಳ ಸೌಲಭ್ಯಗಳೇ ಅಪರೂಪವಾಗಿದ್ದ ಕಾಲದಲ್ಲಿ ಎತ್ತಿನ ಗಾಡಿಯನ್ನೇ ಆಧಾರವನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡು, ಅಪ್ರತಿಮ ಪರಿಶ್ರಮದಿಂದ ಯಶಸ್ಸಿನ ಶಿಖರವೇರಿದ್ದ ಗಿಳಿಯಾರಿನ ಹಿರಿಯ ವ್ಯಕ್ತಿತ್ವ ‘ಗಾಡಿ ಕೂಸಣ್ಣ’ ಎಂದೇ ಖ್ಯಾತರಾಗಿದ್ದ ಕೂಸ ಪೂಜಾರಿ (90+) ಅವರು ವಿಧಿವಶರಾಗಿದ್ದಾರೆ.

ಬರಡು ಭೂಮಿಯಲ್ಲಿ ಬೆವರು ಸುರಿಸಿ ಹೊನ್ನು ಬೆಳೆದ ಕಾಯಕಯೋಗಿಯ ಅಗಲಿಕೆಯಿಂದ ಗಿಳಿಯಾರು ಗ್ರಾಮದಲ್ಲಿ ಶ್ರಮಜೀವಿಯೊಬ್ಬರ ಯುಗವೇ ಅಂತ್ಯವಾದಂತಾಗಿದೆ. ಅವರ ಜೀವನಗಾಥೆ ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕ ಮಾದರಿಯಾಗಿದೆ.

ಹುಲ್ಲಿನ ಮನೆಯಿಂದ ಆರಂಭವಾದ ಕೂಸಣ್ಣನವರ ಬದುಕು ಕಷ್ಟ-ಸಹನಶೀಲತೆಗಳ ಸಂಕೇತವಾಗಿತ್ತು. ಹಗಲಿಡೀ ಎತ್ತಿನ ಗಾಡಿಯಲ್ಲಿ ಸರಕು ಸಾಗಾಟ, ರಾತ್ರಿಯಿಡೀ ಗದ್ದೆಯಲ್ಲಿ ದುಡಿಮೆ, ಇವೇ ಅವರ ದಿನಚರಿ ಶ್ರಮವೇ ದೇವರು ಎಂಬ ನಂಬಿಕೆಯನ್ನು ಅಳವಡಿಸಿಕೊಂಡ ಅವರು, ತಮ್ಮ ಪರಿಶ್ರಮದ ಮೂಲಕವೇ ಸ್ವಂತ ಮನೆ ನಿರ್ಮಿಸಿಕೊಂಡು, ಕುಟುಂಬದ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆತ್ತಿದರು.

ಕಾಲಕ್ರಮೇಣ ಮಗ ಭೋಜ ಪೂಜಾರಿ ಅವರೊಂದಿಗೆ ಸೇರಿ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಟ್ಟ ಅವರು, ಗಿರಿಜಾ ರೋಡ್ ಲೈನ್ಸ್ ಮೂಲಕ ಹತ್ತಾರು ವಾಹನಗಳು, ಜೆಸಿಬಿ, ಹಿಟಾಚಿಗಳ ಮಾಲೀಕರಾಗುವ ಮಟ್ಟಕ್ಕೆ ಕುಟುಂಬವನ್ನು ಬೆಳೆಸಿದರು. ಈ ಸಾಧನೆಯ ಹಿಂದೆ ಕೂಸಣ್ಣನವರ ಶ್ರಮವೇ ಬಲವಾದ ಅಡಿಪಾಯವಾಗಿದೆ.

ಕೂಸ ಪೂಜಾರಿಯವರ ಪರಿಶ್ರಮ ಮತ್ತು ಸಾಧನೆಯನ್ನು ಗೌರವಿಸಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಎತ್ತಿನ ಗಾಡಿಯೊಂದಿಗೆ ಇರುವ ಅವರ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ. ಇದು ಕೇವಲ ಒಂದು ಪ್ರತಿಮೆಯಲ್ಲ ಕರಾವಳಿಯ ಶ್ರಮಜೀವಿ ಸಂಸ್ಕೃತಿಗೆ ಸಲ್ಲಿಸಿದ ಗೌರವದ ಸಂಕೇತವಾಗಿದೆ. ಜೊತೆಗೆ, ಜನಸೇವಾ ಟ್ರಸ್ಟ್ ವತಿಯಿಂದ ನಾಲ್ಕು ವರ್ಷಗಳ ಹಿಂದೆ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗಿತ್ತು.

ಎಷ್ಟೇ ಆಸ್ತಿ-ಅಂತಸ್ತು ಗಳಿಸಿದ್ದರೂ ಕೂಸಣ್ಣನವರು ತಮ್ಮ ಸರಳತೆಯನ್ನು ಎಂದಿಗೂ ಬಿಟ್ಟವರಲ್ಲ. ಇತ್ತೀಚಿನ ವರ್ಷಗಳವರೆಗೂ ತಮ್ಮ ಕಂಬಳದ ಕೋಣಗಳನ್ನು ಸ್ವತಃ ಮೇಯಿಸಲು ಹೋಗುತ್ತಿದ್ದ ಅವರು, ‘ಬನಿ ಕೂಕಣಿ’ ಎಂಬ ಆತ್ಮೀಯ ಮಾತುಗಳಿಂದ ಎಲ್ಲರ ಮನ ಗೆದ್ದಿದ್ದರು. ಅವರ ಮುಗ್ಧ ನಗು ಗಿಳಿಯಾರು ಗ್ರಾಮದಲ್ಲಿ ಸದಾ ನೆನಪಾಗಿಯೇ ಉಳಿಯಲಿದೆ.
ಮೃತರು ಪುತ್ರರಾದ ಪ್ರಖ್ಯಾತ ಉದ್ಯಮಿ ಭೋಜ ಪೂಜಾರಿ, ಸಂತೋಷ್ ಪೂಜಾರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕೂಸಣ್ಣನವರ ಅಗಲಿಕೆಗೆ ಕೋಟ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.