ಡೈಲಿವಾರ್ತೆ:05/ಏಪ್ರಿಲ್ /2026

ಅಮಾಸೆಬೈಲು: ಅಕ್ರಮ ಜಾನುವಾರು ಸಾಗಾಟ – ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ – ನಾಲ್ವರು ವಶ, ಎರಡು ಎತ್ತುಗಳ ರಕ್ಷಣೆ

ಅಮಾಸೆಬೈಲು: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಅಮಾಸೆಬೈಲು ಪೊಲೀಸರು ಭೇದಿಸಿದ್ದು, ನಾಲ್ವರನ್ನು ವಶಕ್ಕೆ ಪಡೆದು ಎರಡು ಎತ್ತುಗಳನ್ನು ರಕ್ಷಿಸಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.

ದಿನಾಂಕ 05-04-2026ರಂದು ಬೆಳಗ್ಗೆ ಸುಮಾರು 5 ಗಂಟೆಗೆ, ಹೊಸಂಗಡಿ ಗ್ರಾಮದ ಮುತ್ತಿನ ಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಸಿ ಕುಮಾರ್ ಪಿ. ಹಾಗೂ ಸಿಬ್ಬಂದಿ ಗುರುಡ್ಡಿ ಹಚಡದ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು.

ಹುಲಿಕಲ್ ಘಾಟಿ ಕಡೆಯಿಂದ ಬರುತ್ತಿದ್ದ KA 25-AB 6246 ಸಂಖ್ಯೆಯ ಟಾಟಾ ಇಂಟ್ರಾ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಹಿಂಭಾಗದಲ್ಲಿ ಎರಡು ಎತ್ತುಗಳನ್ನು ಯಾವುದೇ ಮೇವು-ಆಹಾರ ನೀಡದೆ, ಒಂದಕ್ಕೊಂದು ಹತ್ತಿಕ್ಕುವಂತೆ ಕ್ರೂರವಾಗಿ ಕಟ್ಟಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು. ವಿಚಾರಣೆ ವೇಳೆ ಜಾನುವಾರುಗಳನ್ನು ವಧೆಗೆ ಕೊಂಡೊಯ್ಯಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಈ ವೇಳೆ, ಬೆಂಗಾವಲಾಗಿ ಬಂದಿದ್ದ KA 47 A 6169 ಸಂಖ್ಯೆಯ ಬಿಳಿ ಬಣ್ಣದ ಟೊಯೋಟಾ ಎಟಿಯೊಸ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಮುಸ್ತಾಕ್ ಹುಸೇನ್ ಸಾಬ್ ನದಾಫ್ (29), ರಾಮದುರ್ಗ, ಬೆಳಗಾವಿ ಜಿಲ್ಲೆ
ಸಲೀಂ ಹುಸೇನ್ ಸಾಬ್ ನದಾಫ್ (33), ರಾಮದುರ್ಗ, ಬೆಳಗಾವಿ ಜಿಲ್ಲೆ
ನದೀಂ ಅಬ್ದುಲ್ ಖಾದರ್ (34), ಕಂಡ್ಲೂರು, ಕುಂದಾಪುರ ತಾಲೂಕು
ಮಹಮ್ಮದ್ ನೌಫಿಲ್ ಬಂಧಿತ ಆರೋಪಿಗಳು.
ಪತ್ತೆಯಾದ ಎರಡು ಎತ್ತುಗಳ ಅಂದಾಜು ಮೌಲ್ಯ ₹1 ಲಕ್ಷವಾಗಿದ್ದು, ಟಾಟಾ ಇಂಟ್ರಾ ವಾಹನದ ಮೌಲ್ಯ ಸುಮಾರು ₹4 ಲಕ್ಷ ಎಂದು ತಿಳಿದುಬಂದಿದೆ.
ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026ರಂತೆ ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020ರ ಕಲಂ 4, 5, 7, 12 ಹಾಗೂ ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ ಮತ್ತು ಐಎಂವಿ ಕಾಯ್ದೆಯ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಾಗಿದೆ.