ಡೈಲಿವಾರ್ತೆ:05/ಏಪ್ರಿಲ್ /2026

ಕೋಡಿ ಕನ್ಯಾಣದಲ್ಲಿ ಮದರಸಾ ನೂತನ ಕಟ್ಟಡ ಲೋಕಾರ್ಪಣೆ – ಜುಮ್ಮಾ ಮಸೀದಿ ವಾರ್ಷಿಕ ಮಹಾಸಭೆ ಯಶಸ್ವಿ

ಕೋಟ: ಕೋಡಿ ಕನ್ಯಾಣ ಹಯಾತುಲ್ ಇಸ್ಲಾಂ ಮದರಸಾದ ನೂತನ ಕಟ್ಟಡವು ಭಾನುವಾರ ಬೆಳಿಗ್ಗೆ ಲೋಕಾರ್ಪಣೆಗೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನೆರವೇರಿತು.

ಮಸೀದಿಯ ಖತೀಬ್ ಸಿದ್ದಿಕ್ ಸಖಾಫಿ ಅವರು ಕಟ್ಟಡವನ್ನು ಉದ್ಘಾಟಿಸಿದರು. ಸಂಶುದ್ದೀನ್ ಝಹರಿ ಅವರು ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾತಿನ ಬಾಂಧವರು ಉಪಸ್ಥಿತರಿದ್ದರು.

ಇದೇ ವೇಳೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಕೋಡಿ ಕನ್ಯಾಣ ಇದರ ವಾರ್ಷಿಕ ಮಹಾಸಭೆಯು ಏಪ್ರಿಲ್ 5ರಂದು ಭಾನುವಾರ ಬೆಳಿಗ್ಗೆ ಇಸ್ಮಾಯಿಲ್ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬ್ ಸಿದ್ದಿಕ್ ಸಖಾಫಿ ಅವರ ದುವಾದೊಂದಿಗೆ ಸಭೆ ಆರಂಭಗೊಂಡಿತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಹುಸೇನ್ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಜಮಾತಿನ ನೂರಾರು ಸದಸ್ಯರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ 2023–2026ರ ಆಡಳಿತ ಸಮಿತಿಯನ್ನು 2026–2029ನೇ ಅವಧಿಗೂ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇಸ್ಮಾಯಿಲ್ ಬಿ.ಕೆ ಅವರನ್ನು 2026–2029ರ ಅವಧಿಗೆ ಸರ್ವಾನುಮತದಿಂದ ಅಧ್ಯಕ್ಷರಾಗಿ ಮರುನೇಮಕ ಮಾಡಲಾಯಿತು.

ನೂತನ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆ. ಹುಸೇನ್, ಕೋಶಾಧಿಕಾರಿಯಾಗಿ ಆಬ್ಬಾಸ್ ಆಲಿ, ಉಪಾಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಕೋಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಹಮಾನ್, ಇಮ್ರಾನ್, ಮುನ್ನ, ಮಜೀದ್, ಶಫಿಯುಲ್ಲಾ, ರಜಬ್, ನಿಝಾಮ್, ಮಹಮ್ಮದ್ ಮತ್ತು ನಿಝಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.