ಡೈಲಿವಾರ್ತೆ:05/ಏಪ್ರಿಲ್ /2026

ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಚಾರಣಿಗ ಮಹಿಳೆ ಸುರಕ್ಷಿತ: ನಾಲ್ಕು ದಿನಗಳ ಬಳಿಕ ಪತ್ತೆ

​ಮಡಿಕೇರಿ: ಕೊಡಗು ಜಿಲ್ಲೆಯ ಅತಿ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಮಹಿಳೆ ಶರಣ್ಯ (35) ಅವರು ಭಾನುವಾರ (ಏಪ್ರಿಲ್ 5) ಪತ್ತೆಯಾಗಿದ್ದಾರೆ.

​ಘಟನೆಯ ವಿವರ:
ಕೇರಳದಿಂದ ಒಬ್ಬರೇ ಬಂದಿದ್ದ ಶರಣ್ಯ ಅವರು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಗುರುವಾರ (ಏಪ್ರಿಲ್ 2) ಚಾರಣ ಆರಂಭಿಸಿದ್ದರು. ಅಂದು ಮಧ್ಯಾಹ್ನ ತಾವು ತಂಗಿದ್ದ ಹೋಂ ಸ್ಟೇ ಮಾಲೀಕರಿಗೆ ಕರೆ ಮಾಡಿ, ತಾವು ದಾರಿ ತಪ್ಪಿರುವುದಾಗಿ ತಿಳಿಸಿದ್ದರು. ಆ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.

ಮಹಿಳೆಯ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹ ದಳ (ANF) ಹಾಗೂ ಎಸ್‌ಡಿಆರ್‌ಎಫ್ (SDRF) ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಒಟ್ಟು 9 ತಂಡಗಳನ್ನು ರಚಿಸಿ, ದಟ್ಟ ಅರಣ್ಯದಲ್ಲಿ ಶೋಧ ನಡೆಸಲಾಗಿತ್ತು. ತಂತ್ರಜ್ಞಾನದ ನೆರವಿಗಾಗಿ ಥರ್ಮಲ್ ಡ್ರೋನ್ ಕ್ಯಾಮೆರಾ ಹಾಗೂ ಶ್ವಾನದಳವನ್ನೂ ಬಳಸಿಕೊಳ್ಳಲಾಗಿತ್ತು.

ಭಾನುವಾರ ಸ್ಥಳೀಯ ಕುಡಿಯ ಜನಾಂಗದವರು ಕಾಡಿನೊಳಗೆ ಹುಡುಕಾಟ ನಡೆಸುತ್ತಿದ್ದಾಗ ಮಹಿಳೆ ಪತ್ತೆಯಾಗಿದ್ದಾರೆ. ಸದ್ಯ ಅವರನ್ನು ಕಾಡಿನಿಂದ ಸುರಕ್ಷಿತವಾಗಿ ಕರೆತರಲಾಗುತ್ತಿದ್ದು, ನಾಲ್ಕು ದಿನಗಳ ಕಾಲ ಆಹಾರ ಮತ್ತು ಸರಿಯಾದ ಆಶ್ರಯವಿಲ್ಲದೆ ಕಾಡಿನಲ್ಲೇ ಕಳೆದಿದ್ದರಿಂದ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

​ಸ್ಥಳೀಯರು ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಕಾರ್ಯಾಚರಣೆಯ ಫಲವಾಗಿ ಕೊನೆಗೂ ಚಾರಣಿಗ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.