ಡೈಲಿವಾರ್ತೆ:10/ಏಪ್ರಿಲ್ /2026

ಕುಂದಾಪುರ: ರಾಜ್ಯ ಮಟ್ಟದಲ್ಲಿ ಮಿನುಗಿದ ಸುಣ್ಣಾರಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ – 9 ರ‍್ಯಾಂಕ್ ಗಳ ಭರ್ಜರಿ ಸಾಧನೆ

ಕುಂದಾಪುರ: ಉಡುಪಿ ಜಿಲ್ಲೆಯ ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾ ಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಮೇಲುಗೈಯನ್ನು ಸಾಬೀತುಪಡಿಸಿದ್ದು, ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದ 9 ರ‍್ಯಾಂಕ್ ಗಳನ್ನು ಬಾಚಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಐತಿಹಾಸಿಕ ಚಾಪನ್ನು ಮೂಡಿಸಿದೆ ಎಂದು ಎಂ. ಎಂ. ಹೆಗ್ಡೆ ಹಾಗೂ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ಹೇಳಿದರು.
ಅವರು ಶುಕ್ರವಾರ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2012ರಲ್ಲಿ ಕೇವಲ 40 ವಿದ್ಯಾರ್ಥಿಗಳೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಆರಂಭವಾದ ಈ ಸಂಸ್ಥೆ, ಇಂದಿಗೆ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯದ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದಿದೆ. ಇಂದು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಸಾಧಿಸಿರುವ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.

​ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಮಾನ್ಯ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ (Phy-100, Maths-100, CS-100, Kan-100) ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
​ಅನುಪ ಶೇಖರ್ ನಾಯ್ಕ (595), ಬಾಲ ಗೌಡ ಬಸವರಾಜ ಮಂಗೋಜಿ (592), ಆಯುಷ್ ಶಣೈ (592).
​ವಾಣಿಜ್ಯ ವಿಭಾಗದಲ್ಲಿ ಕಿಶನ್ ಕುಮಾರ್ ಮತ್ತು ಗಿರೀಶ್ ಹೆಗ್ಡೆ (592), ಸನ್ಸಿತ ಎಸ್.ಎನ್ (592), ಸಾನ್ವಿ ಶೆಟ್ಟಿ (591), ತನ್ವಿ ಶೆಟ್ಟಿ (590) ಹಾಗೂ ತ್ರಿಶಾ (590) ಅವರು ರಾಜ್ಯಮಟ್ಟದ ರ‍್ಯಾಂಕ್ ಗಳಿಸಿದ್ದಾರೆ.
​ಸಂಸ್ಥೆಯ ಒಟ್ಟು 314 ವಿದ್ಯಾರ್ಥಿಗಳಲ್ಲಿ 232 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (Distinction) ಪಡೆದರೆ, 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ, 252 ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ ಅಂಕಗಳಿಗಿಂತ ಪಿಯುಸಿಯಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವುದು ಸಂಸ್ಥೆಯ ಗುಣಮಟ್ಟದ ಬೋಧನೆಗೆ ಸಾಕ್ಷಿಯಾಗಿದೆ.
​”ನಮ್ಮ ಸಂಸ್ಥೆಯು ಕೇವಲ ಶೈಕ್ಷಣಿಕವಲ್ಲದೆ ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದಲ್ಲೂ ಮುಂಚೂಣಿಯಲ್ಲಿದೆ. ಈ ಯಶಸ್ಸು ವಿದ್ಯಾರ್ಥಿಗಳ ಕಠಿಣ ಶ್ರಮ, ಉಪನ್ಯಾಸಕರ ಅವಿರತ ಮಾರ್ಗದರ್ಶನ ಮತ್ತು ಆಡಳಿತ ಮಂಡಳಿಯ ಸಹಕಾರದ ಫಲವಾಗಿದೆ ಎಂದು ಎಂ. ಮಹೇಶ್ ಹೆಗ್ಡೆ ಹೇಳಿದರು.

ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸೈ! ಕೇವಲ ಬೋರ್ಡ್ ಪರೀಕ್ಷೆ ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಂಸ್ಥೆ ಅಮೋಘ ಸಾಧನೆ ಮಾಡಿದೆ. JEE: 21 ವಿದ್ಯಾರ್ಥಿಗಳು 90 ರಿಂದ 98 ಪರ್ಸೆಂಟೈಲ್ ಗಳಿಸಿದ್ದಾರೆ.
​CS ಫೌಂಡೇಶನ್: ಪರೀಕ್ಷೆ ಎದುರಿಸಿದ 24 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
​CET ಮತ್ತು NEET ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ಗುರಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್: ಕೆ. ನಾಗರಾಜ ಶೆಟ್ಟಿ

ಪ್ರಾಂಶುಪಾಲ ಕೆ. ನಾಗರಾಜ ಶೆಟ್ಟಿ ಮಾತನಾಡಿ, “ನಮ್ಮ ಸಂಸ್ಥೆಯಲ್ಲಿ ಸೈನ್ಸ್ ಹಾಗೂ ಕಾಮರ್ಸ್ ವಿಭಾಗಗಳಲ್ಲಿ ಶೇಕಡಾ 98ರಷ್ಟು ಉತ್ತಮ ಫಲಿತಾಂಶ ಬಂದಿದೆ. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ ಜೆಇಇ, ಸಿಇಟಿ, ನೀಟ್ ಹಾಗೂ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಗಳನ್ನು ಗಳಿಸಿರುವುದು ಹೆಮ್ಮೆಯ ವಿಷಯ. ಶೈಕ್ಷಣಿಕ ಕ್ಷೇತ್ರದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ವಿದ್ಯಾರ್ಥಿಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕೊರೋನಾ ನಂತರವೂ ನಿರಂತರ ಉತ್ತಮ ಫಲಿತಾಂಶ ನೀಡುತ್ತಿರುವುದು ಸಂಸ್ಥೆಯ ದೊಡ್ಡ ಸಾಧನೆ ಎಂದ ಅವರು, ಹಿಂದಿನ ವರ್ಷ ರಾಜ್ಯದಲ್ಲಿ ಐದನೇ ಸ್ಥಾನ ಪಡೆದಿದ್ದೇವೆ. ಈ ವರ್ಷ ಮೂರನೇ ಸ್ಥಾನ ಪಡೆದಿದ್ದೇವೆ. ಮುಂದಿನ ವರ್ಷ ಪ್ರಥಮ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಪ್ರಾಂಶುಪಾಲ ಕೆ. ನಾಗರಾಜ ಶೆಟ್ಟಿ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.