


ಡೈಲಿವಾರ್ತೆ:10/ಏಪ್ರಿಲ್ /2026

ಬುಕ್ ಮಾಡಿದ ದಿನವೇ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ವಿತರಣೆ: ಏಜೆನ್ಸಿಗಳಿಗೆ ಸರ್ಕಾರದ ಸೂಚನೆ

ಬೆಂಗಳೂರು, ಏಪ್ರಿಲ್ 10: ರಾಜ್ಯದಲ್ಲಿ ಉಂಟಾಗಿರುವ ಎಲ್‌ಪಿಜಿ (LPG) ಗ್ಯಾಸ್ ಕೊರತೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮುಂದೆ ಗ್ರಾಹಕರು ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಿದ ದಿನವೇ ವಿತರಣೆ ಮಾಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ.
ಸಿಲಿಂಡರ್ ವಿತರಣೆ ವಿಳಂಬವಾಗಿ ಜನರು ಏಜೆನ್ಸಿಗಳ ಮುಂದೆ ದೀರ್ಘ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಕ್ಯೂ ವ್ಯವಸ್ಥೆ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ವಿತರಣೆ 20ರಿಂದ 25 ದಿನಗಳವರೆಗೆ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣದ ವಿತರಣೆಯ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಇನ್ನೊಂದೆಡೆ, ವಾಣಿಜ್ಯ (ಕಮರ್ಷಿಯಲ್) ಸಿಲಿಂಡರ್ ಸರಬರಾಜುದಲ್ಲಿ ಕೆಲ ಮಟ್ಟಿಗೆ ಸುಧಾರಣೆ ಕಂಡುಬಂದಿದ್ದರೂ, ಆಟೋ ಗ್ಯಾಸ್ ಕೊರತೆ ಇನ್ನೂ ಮುಂದುವರಿದಿದೆ. ಈ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣವೆಂದು ರಾಜ್ಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಆರೋಪಿಸಿದ್ದು, ಸಮಸ್ಯೆ ಶೀಘ್ರ ಬಗೆಹರಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.