ಡೈಲಿವಾರ್ತೆ:14/ಏಪ್ರಿಲ್ /2026

ಬ್ರಹ್ಮಾವರದಲ್ಲಿ ಸಾಲದ ಒತ್ತಡಕ್ಕೆ ಬಲಿಯಾದ ಉದ್ಯಮಿ – ಲಾಡ್ಜ್ ಕೋಣೆಯಲ್ಲಿ ಆತ್ಮಹತ್ಯೆ

ಬ್ರಹ್ಮಾವರ, ಏ.14: ಸಾಲದ ಒತ್ತಡ ಹಾಗೂ ಆರ್ಥಿಕ ಸಂಕಷ್ಟದಿಂದ ಮನನೊಂದು ಉದ್ಯಮಿಯೋರ್ವರು ಲಾಡ್ಜ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಮೃತರನ್ನು ನರಸಿಂಹ ಹೆಚ್.ಎಸ್ (66) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ನೆಲಮಂಗಲದಲ್ಲಿ “ಶ್ರೀಕೃಷ್ಣ ಎಂಟರ್ ಪ್ರೈಸಸ್” ಎಂಬ ಲೇಬರ್ ಕಾಂಟ್ರಾಕ್ಟ್ ಸಂಸ್ಥೆಯನ್ನು ಸುಮಾರು ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದರು. ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ತಿಂಗಳಿಗೊಮ್ಮೆ ತಮ್ಮ ಊರಿಗೆ ಭೇಟಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ವ್ಯವಹಾರದಲ್ಲಿ ಉಂಟಾದ ಆರ್ಥಿಕ ಸಂಕಷ್ಟದಿಂದ ನರಸಿಂಹ ಅವರು ಹಲವರಿಂದ ಬಡ್ಡಿ ಹಣ ಪಡೆದುಕೊಂಡಿದ್ದು, ಹೆಚ್ಚಿನ ಬಡ್ಡಿ ಪಾವತಿಸುತ್ತಿದ್ದರು ಎನ್ನಲಾಗಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಬಡ್ಡಿ ಹಣವನ್ನು ಸಮಯಕ್ಕೆ ಪಾವತಿಸಲು ಸಾಧ್ಯವಾಗದೆ, ಸಾಲ ನೀಡಿದವರ ಒತ್ತಡ ಹಾಗೂ ಕಿರುಕುಳದಿಂದ ಮನಸ್ಸಿಗೆ ಭಾರೀ ನೋವುಂಟಾಗಿತ್ತು ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ಬ್ರಹ್ಮಾವರದ ಆಶ್ರಯ ಲಾಡ್ಜ್‌ಗೆ ಬಂದ ನರಸಿಂಹ ಅವರು ಕೋಣೆಯಲ್ಲಿ ತಂಗಿದ್ದು, ಏಪ್ರಿಲ್ 13ರ ರಾತ್ರಿ 9:30ರಿಂದ ಏಪ್ರಿಲ್ 14ರ ಬೆಳಿಗ್ಗೆ 9 ಗಂಟೆಯೊಳಗಿನ ಅವಧಿಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೈಲಾನ್ ಹಗ್ಗ ಕಟ್ಟಿ, ಅದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಘಟನೆ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 66/2026ರಂತೆ ಪ್ರಕರಣ ದಾಖಲಾಗಿದ್ದು, ಕಲಂ 108, 3(5) ಬಿಎನ್ಎಸ್ಎಸ್ ಅಡಿ ತನಿಖೆ ಮುಂದುವರಿದಿದೆ.
ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.