



ಡೈಲಿವಾರ್ತೆ:15/ಏಪ್ರಿಲ್ /2026

ಯೋಗೀಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 19 ಮಂದಿ ದೋಷಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಪ್ರಕಟಿಸಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳನ್ನು ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿದೆ.
ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದಲ್ಲಿ ಯೋಗೀಶ್ ಗೌಡ ಅವರನ್ನು ಅವರದೇ ಮಾಲೀಕತ್ವದ ಜಿಮ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಈ ಕೊಲೆಯ ಹಿಂದಿನ ಪ್ರಮುಖ ಸಂಚುಕೋರ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿ (A15) ಎಂದು ಗುರುತಿಸಲಾಗಿದ್ದು, ಒಳಸಂಚು ರೂಪಿಸಿದ ಆರೋಪದಡಿಯಲ್ಲಿ ನ್ಯಾಯಾಲಯ ಈಗ ಅವರನ್ನು ದೋಷಿ ಎಂದು ಪರಿಗಣಿಸಿದೆ.
ಸೆಪ್ಟೆಂಬರ್ 2019ರಲ್ಲಿ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು.
ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದ ಅವರು 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ, ಪ್ರಕರಣದ ಗಂಭೀರತೆ ಮತ್ತು ತನಿಖಾ ಹಂತಗಳ ಹಿನ್ನೆಲೆಯಲ್ಲಿ ಅವರು 2025ರ ಜೂನ್ 13ರಿಂದ ಮತ್ತೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನ್ಯಾಯಾಲಯದ ತೀರ್ಪು
ಮಾರ್ಚ್ ಅಂತ್ಯದಲ್ಲಿ ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ್ದ ವಿಶೇಷ ನ್ಯಾಯಾಲಯವು, ಏಪ್ರಿಲ್ 2ರಂದು ಲಿಖಿತ ವಾದಗಳನ್ನು ಸ್ವೀಕರಿಸಿತ್ತು. ಇಂದು (ಏಪ್ರಿಲ್ 15) ಪ್ರಕರಣದ ಎಲ್ಲಾ 21 ಆರೋಪಿಗಳ ಸಮ್ಮುಖದಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, 19 ಮಂದಿಯನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದಾರೆ. ಉಳಿದ ಇಬ್ಬರ ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಮುಂದಿನ ಹಂತ ಅಪರಾಧಿಗಳೆಂದು ಘೋಷಿತವಾಗಿರುವ ವಿನಯ್ ಕುಲಕರ್ಣಿ ಸೇರಿದಂತೆ 19 ಜನರಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣದ ಕುರಿತಂತೆ ನಾಳೆ (ಏಪ್ರಿಲ್ 16) ನ್ಯಾಯಾಲಯದಲ್ಲಿ ಸುದೀರ್ಘ ವಾದ ಮಂಡನೆ ನಡೆಯಲಿದೆ.
ಈ ವಾದದ ನಂತರ ನ್ಯಾಯಾಲಯವು ಶಿಕ್ಷೆಯ ವಿವರಗಳನ್ನು ಪ್ರಕಟಿಸಲಿದೆ.
ಈ ತೀರ್ಪು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಪ್ರಾಸಿಕ್ಯೂಷನ್ ಪರ ವಕೀಲರು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸುವ ಸಾಧ್ಯತೆಯಿದೆ.