ಡೈಲಿವಾರ್ತೆ:15/ಏಪ್ರಿಲ್ /2026

ಸಂವಿಧಾನದಿಂದಾಗಿ ಭಾರತ ಇಂದಿಗೂ ಅಖಂಡವಾಗಿ ಉಳಿದಿದೆ: ಶ್ಯಾಮರಾಜ್ ಬಿರ್ತಿ

​ಬ್ರಹ್ಮಾವರ: ಭಾರತವು ನೂರಾರು ಭಾಷೆ, ಜಾತಿ, ಸಂಸ್ಕೃತಿ ಮತ್ತು ಪ್ರಾಕೃತಿಕ ವೈವಿಧ್ಯತೆಗಳನ್ನು ಹೊಂದಿದ್ದರೂ, ಅರುಣಾಚಲ ಪ್ರದೇಶದಿಂದ ಗುಜರಾತ್‌ವರೆಗೆ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕ ರಾಷ್ಟ್ರವಾಗಿ ಅಖಂಡವಾಗಿ ಉಳಿಯಲು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಪ್ರಮುಖ ಕಾರಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು.

​ಆರೂರಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದದ ಬ್ರಹ್ಮಾವರ ತಾಲೂಕು ಮಟ್ಟದ ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಸಂವಿಧಾನ ಬದಲಾದರೆ ಅಪಾಯ: ಒಂದು ವೇಳೆ ಈ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಡೆದರೆ ಭಾರತವು ಮತ್ತೊಂದು ಸೋವಿಯತ್ ಯೂನಿಯನ್ ಆಗಿ ವಿಘಟನೆಗೊಳ್ಳುವ ಅಪಾಯವಿದೆ. ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಈ ದೇಶದ ಒಳಗಿರುವ ಅಸಮಾನತೆ, ಜಾತೀಯತೆ ಮತ್ತು ಅಸ್ಪೃಶ್ಯತೆಯಿಂದ ದಲಿತರಿಗೆ ಮುಕ್ತಿ ಸಿಗುವುದಿಲ್ಲ ಎಂಬುದು ಅಂಬೇಡ್ಕರ್ ಅವರಿಗೆ ಅರಿವಿತ್ತು. ಅದಕ್ಕಾಗಿ ಅವರು ಜೀವನವಿಡೀ ಹೋರಾಡಿದರು. ಅಂಬೇಡ್ಕರ್ ಜನಿಸದೇ ಇರುತ್ತಿದ್ದರೆ ದಲಿತರ ಬದುಕು ಇಂದಿಗೂ ಅತ್ಯಂತ ಹೀನಾಯ ಸ್ಥಿತಿಯಲ್ಲಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

​ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ದಾರಿ: ದಮನಿತ ಜನಾಂಗಕ್ಕೆ ಸ್ವಾಭಿಮಾನ ಮತ್ತು ಶಿಕ್ಷಣದ ಮಹತ್ವ ತಿಳಿಸಿಕೊಟ್ಟ ಮಹಾನಾಯಕ ಅಂಬೇಡ್ಕರ್. ತಮ್ಮ ಜೀವನವನ್ನು ಕತ್ತಲಲ್ಲಿರಿಸಿಕೊಂಡು ಶೋಷಿತ ವರ್ಗದ ಬದುಕಿಗೆ ಬೆಳಕಾದ ಅವರ ಋಣ ನಮ್ಮ ಮೇಲಿದೆ. ಅಂಬೇಡ್ಕರ್ ನೀಡಿದ ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಮಂತ್ರವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಬಿರ್ತಿ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರೂರು ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉಡುಪಿ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರು ಉಪಸ್ಥಿತರಿದ್ದರು.
​ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕುಮಾರ್ ಕೋಟಾ, ಬಿರ್ತಿ ಸುರೇಶ, ವಡ್ಡರ್ಸೆ ಶ್ರೀನಿವಾಸ್, ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಪ್ರಕಾಶ್ ಹೇರೂರು, ಶರತ್ ಆರೂರು, ಹರೀಶ್ಚಂದ್ರ ಬಿರ್ತಿ, ಎಸ್. ನಾರಾಯಣ್, ಗೋಪಾಲ ಗಿಳಿಯಾರು, ಶಿವಾನಂದ ಬಿರ್ತಿ, ಉಮೇಶ ಸಾಲೀಕೇರಿ, ಸದಾನಂದ ಹಂಗಾರಕಟ್ಟೆ, ನಿಶಾನ್ ಹಂದಾಡಿ ಹಾಗೂ ಸುಧಾಮ ಹಂಗಾರಕಟ್ಟೆ ಉಪಸ್ಥಿತರಿದ್ದರು.
ಆರೂರು ಸಂಚಾಲಕ ನರಸಿಂಹ ಸ್ವಾಗತಿಸಿ, ವಂದಿಸಿದರು.