ಡೈಲಿವಾರ್ತೆ:15/ಏಪ್ರಿಲ್ /2026

23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಲ್ಪೆ ಪೊಲೀಸರ ವಶಕ್ಕೆ

​ಉಡುಪಿ: ಕಾನೂನಿನ ಕಣ್ಣಿಗೆ ಮಣ್ಣೆರಚಿ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಂ. ಬಾಬು (52) ಬಂಧಿತ ಆರೋಪಿ. ಆರೋಪಿಯು ದಶಕಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಹಂತ ಹಂತವಾಗಿ ತನ್ನ ಗುರುತನ್ನು ಮರೆಮಾಚಿಕೊಂಡು ಓಡಾಡುತ್ತಿದ್ದನು. ಈತನ ಪತ್ತೆಗಾಗಿ ಮಲ್ಪೆ ಪೊಲೀಸರು ಕಳೆದ ಐದು ತಿಂಗಳುಗಳಿಂದ ವಿಶೇಷ ತಂಡವನ್ನು ರಚಿಸಿ, ತೀವ್ರ ನಿಗಾ ಇರಿಸಿದ್ದರು. ಆರೋಪಿಯು ಬೆಂಗಳೂರಿನಲ್ಲಿ ವಾಸವಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು.

​ಮಲ್ಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಹಾಗೂ ಹೆಡ್ ಕಾನ್ಸ್ಟೇಬಲ್ ವಿಶ್ವನಾಥ್ ಎಚ್. ಅವರನ್ನೊಳಗೊಂಡ ತಂಡವು ಬೆಂಗಳೂರಿಗೆ ತೆರಳಿತ್ತು. ಅಲ್ಲಿನ ರಾಮಮೂರ್ತಿನಗರದಲ್ಲಿ ಅಚ್ಚುಕಟ್ಟಾಗಿ ಕಾರ್ಯಾಚರಣೆ ನಡೆಸಿದ ತಂಡವು, ಯಾರಿಗೂ ಸಂಶಯ ಬಾರದಂತೆ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

​ಬಂಧಿತ ಆರೋಪಿಯನ್ನು ಇಂದು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುದೀರ್ಘ ಕಾಲದ ತಲೆಮರೆಸುವಿಕೆ ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು, ಆರೋಪಿಗೆ ಏಪ್ರಿಲ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.