



ಡೈಲಿವಾರ್ತೆ:16/ಏಪ್ರಿಲ್ /2026

ದೆಹಲಿ ಏರ್‌ಪೋರ್ಟ್‌ನಲ್ಲಿ ಸ್ಪೈಸ್‌ಜೆಟ್–ಆಕಾಸ ಏರ್ ವಿಮಾನ ಡಿಕ್ಕಿ: ಕ್ಷಣಾರ್ಧದಲ್ಲಿ ತಪ್ಪಿದ ಭಾರೀ ದುರಂತ

ನವದೆಹಲಿ, ಏಪ್ರಿಲ್ 16: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ಭಾರೀ ದುರಂತವೊಂದು ತಪ್ಪಿದ ಘಟನೆ ಇಂದು ಬೆಳಕಿಗೆ ಬಂದಿದೆ.
ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದ ಸ್ಪೈಸ್‌ಜೆಟ್‌ಗೆ ಸೇರಿದ ಬಿ737-700 ವಿಮಾನವು, ನಿಲ್ಲಿಸಿದ್ದ ಆಕಾಸ ಏರ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ, ಆಕಾಸ ಏರ್ ವಿಮಾನದ ಎಡ ರೆಕ್ಕೆಗೆ ಹಾಗೂ ಸ್ಪೈಸ್‌ಜೆಟ್ ವಿಮಾನದ ಬಲ ರೆಕ್ಕೆಗೆ ಹಾನಿಯಾಗಿದೆ. ಜೊತೆಗೆ ಆಕಾಸ ಏರ್ ವಿಮಾನದ ಸ್ಟೆಬಿಲೈಸರ್ ಕೂಡ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಣ್ಣ ಪ್ರಮಾಣದಲ್ಲೇ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಪ್ರಕರಣಗಳು ವರದಿಯಾಗಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸಂಬಂಧಿತ ವಿಮಾನಯಾನ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಹಾನಿಗೊಳಗಾದ ಆಕಾಸ ಏರ್ ವಿಮಾನ (QP 1406) ದೆಹಲಿಯಿಂದ ಹೈದರಾಬಾದ್‌ಗೆ ಹೊರಡಲು ಸಿದ್ಧವಾಗಿತ್ತು ಎಂದು ಕಂಪನಿ ಮೂಲಗಳು ತಿಳಿಸಿವೆ.
ಸ್ಪೈಸ್‌ಜೆಟ್ ವಿಮಾನವು ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದಾಗ ನಿಯಂತ್ರಣ ತಪ್ಪಿ, ನಿಂತಿದ್ದ ವಿಮಾನಕ್ಕೆ ತಗುಲಿದ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿಗಳು ಸೂಚಿಸುತ್ತಿವೆ.
ಘಟನೆಯ ಹಿನ್ನೆಲೆ ಹಾಗೂ ನಿಖರ ಕಾರಣಗಳನ್ನು ಪತ್ತೆಹಚ್ಚಲು ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ವಿಮಾನಯಾನ ನಿಯಂತ್ರಣ ಸಂಸ್ಥೆಗಳು ತನಿಖೆ ಆರಂಭಿಸಿವೆ. ವಿಮಾನ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾದರೂ, ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ