



ಡೈಲಿವಾರ್ತೆ:16/ಏಪ್ರಿಲ್ /2026

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ – ಚಾಲಕನಿಗೆ ಗಂಭೀರ ಗಾಯ

ಅಂಕೋಲಾ: ತಾಲೂಕಿನ ಕಂಚಿನಬಾಗಿಲು ಸಮೀಪದ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಗುರುವಾರ ಮಧ್ಯಾಹ್ನ ಭೀಕರ ದುರಂತವೊಂದು ಸಂಭವಿಸಿದೆ.
ರಾಸಾಯನಿಕ ದ್ರಾವಣ ತುಂಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ, ಕ್ಷಣಾರ್ಧದಲ್ಲಿ ಸ್ಫೋಟಗೊಂಡು ಬೆಂಕಿ ಉಂಡೆಯಾಗಿ ಮಾರ್ಪಟ್ಟಿದೆ. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕ್ಲೀನರ್ ನಾಪತ್ತೆಯಾಗಿದ್ದಾನೆ.
ಘಟನೆಯ ವಿವರ
ಬೆಳಗಾವಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಈ ಟ್ಯಾಂಕರ್ ಕಂಚಿನಬಾಗಿಲು ತಿರುವಿನಲ್ಲಿ ಉರುಳಿ ಬಿದ್ದಿದೆ. ಪಲ್ಟಿಯಾದ ಬೆನ್ನಲ್ಲೇ ಟ್ಯಾಂಕರ್‌ನಲ್ಲಿದ್ದ ಜ್ವಲನಶೀಲ ರಾಸಾಯನಿಕ ಸ್ಫೋಟಗೊಂಡಿದ್ದು, ನೂರಾರು ಅಡಿ ಎತ್ತರಕ್ಕೆ ಬೆಂಕಿ ಜ್ವಾಲೆ ಚಿಮ್ಮಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಟ್ಯಾಂಕರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುತ್ತಮುತ್ತಲಿನ ಮರಗಿಡಗಳಿಗೂ ಬೆಂಕಿ ವ್ಯಾಪಿಸಿ ಕಾಡ್ಗಿಚ್ಚಿನ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯಲ್ಲಿ ತೀವ್ರ ಸುಟ್ಟ ಗಾಯಗಳಿಗೆ ಒಳಗಾದ ಚಾಲಕನನ್ನು ತಕ್ಷಣವೇ ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರದ ಕ್ರಿಮ್ಸ್‌ಗೆ (KRIMS) ರವಾನಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಂಕೋಲಾ, ಕಾರವಾರದ ಅಗ್ನಿಶಾಮಕ ದಳ ಹಾಗೂ ಐಎನ್‌ಎಸ್ ವಜ್ರಕೋಶದ (INS Vajrakosh) ಅಗ್ನಿಶಾಮಕ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ಬೆಂಕಿಯ ತೀವ್ರತೆಯಿಂದಾಗಿ ಹತ್ತಿರ ಹೋಗಲು ಸಾಧ್ಯವಾಗದಿದ್ದರೂ, ಸಿಬ್ಬಂದಿಗಳು ಹರಸಾಹಸ ಪಟ್ಟು ಜ್ವಾಲೆಯನ್ನು ಹತೋಟಿಗೆ ತಂದಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 52ರ ಅಂಕೋಲಾ-ಯಲ್ಲಾಪುರ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ತೀವ್ರ ಪರದಾಡುವಂತಾಯಿತು.
”ಘಟನಾ ಸ್ಥಳಕ್ಕೆ ಅಂಕೋಲಾ ತಹಶೀಲ್ದಾರ್ ನೋರೊನಾ ಹಾಗೂ ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.”