



ಡೈಲಿವಾರ್ತೆ:17/ಏಪ್ರಿಲ್ /2026

ಒಳ ಮೀಸಲಾತಿ ವಿವಾದ: ಹೈಕೋರ್ಟ್–ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬಲಗೈ ಸಮುದಾಯ ತೀರ್ಮಾನ – ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಕರೆ

ಬೆಂಗಳೂರು, ಏ.17: ಒಳ ಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದೆ.

ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಆಯೋಗದ ವರದಿಯ ಅಂಕಿಅಂಶಗಳು ಸಂವಿಧಾನಾತ್ಮಕ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದರು. ಸಮುದಾಯಕ್ಕೆ ನ್ಯಾಯ ದೊರಕಿಸಲು ಕಾನೂನು ಹೋರಾಟ ಅನಿವಾರ್ಯ ಎಂದು ಹೇಳಿದರು.
ರಾಜ್ಯ ಸಂಚಾಲಕ ಸಿದ್ದಯ್ಯ (ನಿವೃತ್ತ ಐಎಎಸ್) ಮಾತನಾಡಿ, ಈ ವರದಿ ಅವೈಜ್ಞಾನಿಕವಾಗಿದ್ದು, ಬಲಗೈ ಸೇರಿ ಹಲವಾರು ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. 12 ಜಿಲ್ಲೆಗಳಲ್ಲಿ ಮರು ಸಮೀಕ್ಷೆ ನಡೆಸಿ ವರದಿಯನ್ನು ತಕ್ಷಣ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಮುಖ್ಯ ಅತಿಥಿ ಚಂದ್ರಶೇಖರಯ್ಯ ಅವರು ವರದಿಯನ್ನು “ಸಂವಿಧಾನ ಬಾಹಿರ” ಎಂದು ಕರೆಯುತ್ತಾ, ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಎಲ್ಲ ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆ ಆಧಾರಿತ ಸಮಾನ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ್, ಒಳ ಮೀಸಲಾತಿಯಲ್ಲಿ ರೋಸ್ಟರ್ ವ್ಯವಸ್ಥೆಯಲ್ಲಿ ಸಮಾನತೆ ಇರಬೇಕು ಎಂದು ಹೇಳಿ, ಬಲಗೈ ಸಮುದಾಯವನ್ನು ‘ಎ’ ಗುಂಪಿಗೆ ಸೇರಿಸುವಂತೆ ಒತ್ತಾಯಿಸಿದರು. ಇತ್ತೀಚಿನ ನೇಮಕಾತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಗಳನ್ನು ಕೂಡ ಉಲ್ಲೇಖಿಸಿದರು.
ವಿಚಾರವಾದಿ ವಿಠಲ್ ವಗ್ಗನ್, ಆಯೋಗದ ವರದಿ ಸಮುದಾಯಗಳಲ್ಲಿ ಭಿನ್ನತೆ ಉಂಟುಮಾಡಿದ್ದು, ಬಲಗೈ ಗುಂಪಿಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.