ಡೈಲಿವಾರ್ತೆ:23/ಏಪ್ರಿಲ್ /2026

ಬಡತನ ಗೆದ್ದ ಬಿದ್ಕಲ್‌ಕಟ್ಟೆಯ ಪ್ರತಿಭೆ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಸ್ ಕಂಡಕ್ಟರ್ ಪುತ್ರ!​

ಕುಂದಾಪುರ: ಕರ್ನಾಟಕ ರಾಜ್ಯ SSLC ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ. 94 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಈ ಫಲಿತಾಂಶದ ನಡುವೆ, ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು ಎಂಬುದನ್ನು ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆಯ ವಿದ್ಯಾರ್ಥಿಯೊಬ್ಬರು ಸಾಬೀತುಪಡಿಸಿದ್ದಾರೆ.

​625ಕ್ಕೆ 625 ಅಂಕಗಳ ಸಾಧನೆ: ಕುಂದಾಪುರ ತಾಲೂಕಿನ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.

ಬಿದ್ಕಲ್‌ಕಟ್ಟೆಯ ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿಗಳ ಪುತ್ರ ಪ್ರೀತಮ್, ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವರು. ತಂದೆ ಗಣಪತಿ ಪೂಜಾರಿ ಅವರು ಬಸ್ ಕಂಡಕ್ಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕಡು ಬಡತನದ ನಡುವೆಯೂ ಮಗನ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತ ದಂಪತಿಗಳ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಂತಾಗಿದೆ.ಪ್ರೀತಮ್ ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಇದೇ ಶಂಕರನಾರಾಯಣದ ಮದರ್ ತೆರೆಸಾ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಮಗನ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಬೋಧಕ ವೃಂದದವರು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.