


ಡೈಲಿವಾರ್ತೆ: 27/ಜು./2026


ಬಾಡಿಗೆ ಭಾಷಣಗಾರರ ಸಂಸ್ಕೃತಿ ಬಿಜೆಪಿಗೆ ಸೀಮಿತ: ಕಾಂಗ್ರೆಸ್‌ಗೆ ಬಾಡಿಗೆ ಭಾಷಣಗಾರರ ಅಗತ್ಯವಿಲ್ಲ, ಬಕೆಟ್ ರಾಜಕೀಯ ಬಿಟ್ಟು ವಿಷಯಾಧಾರಿತ ಚರ್ಚೆಗೆ ಬನ್ನಿ – ಬಿಜೆಪಿ ವಿರುದ್ಧ ನಾಗೇಂದ್ರ ಪುತ್ರನ್ ವಾಗ್ದಾಳಿ

ಉಡುಪಿ: ಬಾಡಿಗೆ ಭಾಷಣಗಾರರನ್ನು ಕರೆಸಿ ಭಾಷಣ ಮಾಡಿಸುವ ದರ್ದು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ, ಅದು ಏನೇ ಇದ್ದರೂ ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಕೋಟ ನಾಗೇಂದ್ರ ಪುತ್ರನ್ ಅವರು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿ ಸತ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಬಿಜೆಪಿ ನಾಯಕರು ವೈಯಕ್ತಿಕ ಟೀಕೆಗಳಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಲ್ಲೇ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ಬಾಡಿಗೆ ಭಾಷಣಗಾರರನ್ನು ಬಳಸಿಕೊಳ್ಳುವ ಪರಿಪಾಠವಿದೆ. ಕುಂದಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಭಾಷಣಗಾರರ ಮೂಲಕ ರಾಜಕೀಯ ಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಕೋಟದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ಅವರು ಮಾಡಿದ ಭಾಷಣದ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ನಾಗೇಂದ್ರ ಪುತ್ರನ್, ರಾಮ, ಸಂಸ್ಕಾರ, ಸಂಸ್ಕೃತಿ ಹಾಗೂ ಭಾರತೀಯ ಮೌಲ್ಯಗಳ ಬಗ್ಗೆ ಅವರು ನೀಡಿದ ಸಂದೇಶ ಸಮಂಜಸವಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಮಾತನಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಪೃಥ್ವಿರಾಜ್ ಶೆಟ್ಟಿ ಅವರು ಬಿಜೆಪಿ ನಾಯಕರನ್ನು ಮೆಚ್ಚಿಸಲು ಬಕೆಟ್ ಹಿಡಿಯುವ ರಾಜಕೀಯ ಬಿಟ್ಟು, ವಿಷಯಾಧಾರಿತ ಚರ್ಚೆಗೆ ಮುಂದಾಗಬೇಕು ಎಂದು ನಾಗೇಂದ್ರ ಪುತ್ರನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದರು.